ಕೊಕ್ಕಡದಲ್ಲಿ ಎಂಡೋಪೀಡಿತರಿಂದ ಮೇ 28ರಿಂದ ಹೋರಾಟ : ಶ್ರೀಧರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಎಂಡೋಸಲ್ಫಾನ್ ಸಂತ್ರಸ್ತರಿಗೆ ಶಾಶ್ವತ ಪುರ್ನವಸತಿ, ಹೆಚ್ಚಿನ ಪರಿಹಾರ ಮೊತ್ತ ಹಾಗೂ ಮಾಸಿಕ ಸ್ಟೈಪೆಂಡ್  ನೀಡಬೇಕೆಂಬ ಬೇಡಿಕೆಗಳಿಗೆ ಸರಕಾರ ಸ್ಪಂದಿಸದೇ ಇರುವುದರಿಂದ ಸಂತ್ರಸ್ತರು ಎಂಡೋ ವಿರೋಧಿ ಹೋರಾಟ ಸಮಿತಿಯ ಆಶ್ರಯದಲ್ಲಿ ಮೇ 28ರಿಂದ ಕೊಕ್ಕಡದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ” ಎಂದು ಸಂಘದ ಅಧ್ಯಕ್ಷ ಕೆ ಶ್ರೀಧರ ಗೌಡ ಹೇಳಿದ್ದಾರೆ.

“ಎರಡು ತಿಂಗಳ ಹಿಂದೆ ಕೊಕ್ಕಡದಲ್ಲಿ ಎಂಡೋಸಲ್ಫಾನ್ ಪೀಡಿತ 4 ಸದಸ್ಯರ ಕುಟುಂಬವೊಂದು ಆತ್ಮಹತ್ಯೆಗೈದ ನಂತರವೂ ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ” ಎಂದು ಅವರು ಆರೋಪಿಸಿದ್ದಾರೆ.

“ಆರಂಭದಲ್ಲಿ ಮೇ 27ರಂದು ಕೊಕ್ಕಡದಲ್ಲಿ ಸಾಂಕೇತಿಕ ಧರಣಿಯನ್ನು ಸಂತ್ರಸ್ತರು ನಡೆಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಹೋದ್ಯೋಗಿಗಳು ಇಲ್ಲಿಗೆ ಬಂದು ಸಂತ್ರಸ್ತರ ಬೇಡಿಕೆ ಆಲಿಸಬೇಕೆಂದು ಮನವಿ ಮಾಡಿದ್ದೇವೆ. ಆದರೆ ಈ ಮನವಿಗೆ ಸ್ಪಂದಿಸಿ ಅವರು ಪ್ರತಿಭಟನಾಕಾರರನ್ನು ಭೇಟಿಯಾಗದೇ ಇದ್ದಲ್ಲಿ ಮೇ 28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು. ಎಂಡೋ ಸಂತ್ರಸ್ತರ ಸುಮಾರು 50 ಕುಟುಂಬ ಸದಸ್ಯರು ಸತ್ಯಾಗ್ರಹದಲ್ಲಿ ಭಾಗವಹಿಸಲು ಒಪ್ಪಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಸಂತ್ರಸ್ತರಿಗೆ 5,000 ರೂ ಮಾಸಿಕ ಸ್ಟೈಪೆಂಡ್, ಅವರ ಹೆತ್ತವರಿಗೆ 2,000 ರೂ ಸ್ಟೈಪೆಂಡ್, ತಕ್ಷಣದ ಪರಿಹಾರ ಮೊತ್ತವಾಗಿ 10 ಲಕ್ಷ ರೂ ಹಾಗೂ ಉಚಿತ ಔಷಧಿ ನೀಡಬೇಕೆಂಬುದು ಸಂಘದ ಬೇಡಿಕೆಯಾಗಿದೆ.