‘ಮನುಷ್ಯ ಪರೋಪಕಾರಿಯಾಗಿರಬೇಕು’

ಮಾನವ ಹಕ್ಕುಗಳ ದಿನಾಚರಣೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾನವ ಹಕ್ಕುಗಳ ಸರಕಾರೇತರ ಸಂಸ್ಥೆಗಳು ಹಾಗೂ ಸಂತ ಆಗ್ನೇಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ ಎಸ್ ಬೀಳಗಿ ಅವರು ಮಾತನಾಡಿ, “ಮನುಷ್ಯ ಪರೋಪಕಾರಿ ಜೀವಿಯಾಗಿರಬೇಕು. ನಮ್ಮಿಂದಾದಷ್ಟು ನೆರವು ಇನ್ನೊಬ್ಬರಿಗೆ ನೀಡಬೇಕು. ಮಾನವ ಹಕ್ಕುಗಳು ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು” ಎಂದರು. ಕರ್ತವ್ಯ ಪಾಲನೆಯ ಹೊರತು ಮಾನವ ಹಕ್ಕುಗಳನ್ನು ಸಂರಕ್ಷಿಸಲು ಅಸಾಧ್ಯ ಎಂದರು.

“ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಕ್ಕುಗಳನ್ನು ಕೇಳಿ ಪಡೆಯುವ ನಾವು ಕರ್ತವ್ಯಗಳ ಬಗ್ಗೆ ಮಾತನಾಡುವುದಿಲ್ಲ. ಮಾನವ ಹಕ್ಕುಗಳು ಮನೆಯಿಂದಲೇ ಜಾರಿಯಾಗಬೇಕು. ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಕೇವಲ ಒಂದೇ ದಿನಕ್ಕೆ ಸೀಮಿತವಾಗಬಾರದು. ನಿರಂತರವಾಗಿ ನಡೆಯಬೇಕು” ಎಂದರು.

ಕಾರ್ಯಕ್ರಮದಲ್ಲಿ ದ ಕ ಜಿಲ್ಲಾಹೆಚ್ಚುವರಿ ಪೊಲೀಸ್ ಅಧಿಕ್ಷಕ ವೇದಮೂರ್ತಿ, ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ಮಧುಶರ್ಮ, ಸಂತ ಆಗ್ನೇಸ್ ಕಾಲೇಜಿನ ಪ್ರಾಂಶುಪಾಲೆ ಎಂ ಜೆಸ್ವೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಡಿಸಿಪಿ ಶಾಂತರಾಜು ಮೊದಲಾದವರಿದ್ದರು.