ಹುಲಿವೇಷದಿಂದ ಸಂಗ್ರಹ ಹಣ ಬಡ ವಿದ್ಯಾರ್ಥಿಗಳಿಗೆ ಹಸ್ತಾಂತರ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ನವರಾತ್ರಿ ಸಂದರ್ಭ ಹುಲಿವೇಷ ಹಾಕಿ ಸಂಗ್ರಹವಾದ ಹಣವನ್ನು ಸರಳ ಕಾರ್ಯಕ್ರಮವೊಂದರಲ್ಲಿ ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸುವ ಮೂಲಕ ಅದಮಾರು ಓಂ ಫ್ರೆಂಡ್ಸ್ ಹಾಗೂ ಅಂಬೇಡ್ಕರ್ ಸಮಿತಿಯ ಸದಸ್ಯರು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸಿದ್ದಾರೆ.

ಮಾದಕ ದ್ರವ್ಯಗಳಿಗೆ ದಾಸರಾಗುತ್ತಿರುವ ಈ ಕಾಲಘಟ್ಟದಲ್ಲಿ, ಸಮಾಜ ಸೇವೆಯನ್ನೇ ಗುರಿಯನ್ನಾಗಿಸಿಕೊಂಡು, ಅವಳಿ ಸಂಸ್ಥೆಗಳ ಸಮಾನಮನಸ್ಕ 60ಕ್ಕೂ ಅಧಿಕ ಸದಸ್ಯರು ನಡೆಸಿದ ಈ ಕಾರ್ಯಕ್ಕೆ ಜನರಿಂದ ಭಾರೀ ಪ್ರಶಂಶೆ ವ್ಯಕ್ತವಾಗಿದೆ. ಪ್ರಥಮ ವರ್ಷದಲ್ಲಿ ಕೇವಲ ಎರಡು ದಿನಗಳ ಕಾಲ ಹುಲಿವೇಷ ಹಾಕಿ ಸುತ್ತಾಡಿ ಅದರಿಂದ ಸಂಗ್ರಹವಾದ ಹಣವನ್ನು ಅರ್ಹ ಆರು ಮಂದಿಗೆ ಹಂಚಲಾಗಿದೆ. ಮತ್ತಷ್ಟು ಬಡ ವಿದ್ಯಾರ್ಥಿಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಮುಂದಿನ ವರ್ಷ ನವರಾತ್ರಿಯ ಒಂಭತ್ತು ದಿನಗಳಕಾಲ ಹುಲಿವೇಷ ಧರಿಸಿ ಹಣ ಸಂಗ್ರಹ ನಡೆಸಿ ಬಡ ವಿದ್ಯಾರ್ಥಿಗಳಿಗೆ ಹಂಚಲಾಗುವುದು ಎಂಬುದಾಗಿ ಸಂಸ್ಥೆಯ ಮುಖ್ಯಸ್ಥರಾದ ಸುದಾನಂದ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮಸ್ಥ ನಾಗರಾಜ್ ಶೆಟ್ಟಿ ಕುಂಜೂರು, ವಿವಿಧ ರೀತಿಯಲ್ಲಿ ಸಮಾಜಸೇವೆಗಳನ್ನು ನಡೆಸುತ್ತಾ ಸ್ಥಳೀಯವಾಗಿ ಜನ ಮನ್ನಣೆ ಪಡೆದಿರುವ ಈ ಅವಳಿ ಸಂಸ್ಥೆಗಳ ಯುವಕರ ಸಾಧನೆ ಅಭಿನಂಧನಾರ್ಹ, ಮುಂದಿನ ದಿನದಲ್ಲಿ ಇವರ ಸಮಾಜಸೇವೆಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿಲ್ಲಿ ಗ್ರಾಮಸ್ಥರಾದ ನಾವು ಸರ್ವರೀತಿಯಲ್ಲಿ ಅವರಿಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.