ಕ್ಯಾನ್ಸರ್ ಪೀಡಿತರಿಗಾಗಿ ಹುಲಿವೇಷ ಧರಿಸಿದ ವಿದ್ಯಾರ್ಥಿಗಳು

ಮಣಿಪಾಲ ಗೋಲ್ಡನ್ ಟೈಗರ್ ಸಂಘಟನೆ ಮಾನವೀಯ ಕಾರ್ಯ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಇಪ್ಪತ್ತಕ್ಕೂ ಅಧಿಕ ಉಡುಪಿ ಜಿಲ್ಲಾ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹುಲಿವೇಷ ಹಾಕಿ ಅದರಿಂದ ಬರುವ ಆದಾಯವನ್ನು, ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಬಡಪಾಯಿಗಳ ಚಿಕಿತ್ಸೆಗಾಗಿ ನೀಡುವ ಸದುದ್ದೇಶ ಇಟ್ಟುಕೊಂಡು ತಮ್ಮ ಪ್ರಥಮ ವರ್ಷದ ಸಮಾಜಸೇವೆಯನ್ನು ಕಾಪು ಹೊಸ ಮಾರಿಯಮ್ಮ ದೇವಸ್ಥಾನದಿಂದ ಆರಂಭಗೊಳಿಸಿದ್ದಾರೆ.

ಕಾಲೇಜು ವಿದ್ಯಾರ್ಥಿಗಳೇ ಕಳೆದ ಒಂದು ವರ್ಷ ಹಿಂದೆ ರಚಿಸಿದ ಸಂಘಟನೆ `ಗೋಲ್ಡನ್ ಟೈಗರ್’ ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬ ನಿಟ್ಟಿನಲ್ಲಿ ರಚಿಸಲಾದ ಈ ಸಂಘಟನೆಯ ದೇಯೋದ್ಧೇಶವನ್ನು ಅರಿತ ಈ ಸಂಘಟನೆಯ ನೂರೈವತ್ತು ವಿದ್ಯಾರ್ಥಿಗಳು ಹಿರಿಯರ ಮಾರ್ಗದರ್ಶನ ಪಡೆದು ಇದೀಗ ಹುಲಿವೇಷ ಹಾಕಿ ಜಿಲ್ಲೆಯಾದ್ಯಾಂತ ಸುತ್ತಾಡಿ ಅದರಿಂದ ಬರುವ ಆದಾಯವನ್ನು ಅನಾರೋಗ್ಯ ಪೀಡಿತರಿಗೆ ನೀಡುವ ಮೂಲಕ, ಅದೇಷ್ಟೋ ಕುಟುಂಬಗಳ ಬಾಳಿನಲ್ಲಿ ಹೊಸ ಬೆಳಕು ಮೂಡುವಂತೆ ಮಾಡುವುದರೊಂದಿಗೆ ತಮ್ಮ ಚೊಚ್ಚಲ ಅಭಿಯಾನ ಆರಂಭಿಸುವ ಮೂಲಕ ಇತರೆ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ.

ಹುಲಿವೇಷ ಹಾಕಿ ಸಮಾಜಸೇವೆ ಆರಂಭಿಸುವಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, “ಬಹಳಷ್ಟು ಉತ್ಸಾಹಿ ವಿದ್ಯಾರ್ಥಿ ಸಮೂಹ `ಗೋಲ್ಡಲ್ ಟೈಗರ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು, ಅದರ ಮೂಲಕ ಸದಸ್ಯರು ಹುಲಿವೇಷ ಹಾಕಿ ಎರಡು ಮೂರು ದಿನಗಳ ಕಾಲ ಜಿಲ್ಲೆಯಾದ್ಯಾಂತ ತಮ್ಮ ಪ್ರದರ್ಶನವನ್ನು ಪ್ರದರ್ಶಿಸಿ ಅವರು ಪ್ರೀತಿಯಿಂದ ನೀಡುವ ದೇಣಿಗೆಯನ್ನು ಒಟ್ಟು ಸೇರಿಸಿ ಅದರಲ್ಲಿ ವೇಷ ಹಾಗೂ ಇತರೆ ಖರ್ಚುಗಳು ತೆಗೆದು ಉಳಿಕೆ ಹಣವನ್ನು ಕ್ಯಾನ್ಸರ್ ಪೀಡಿತರಿಗೆ ನೀಡುವ ಉತ್ತಮ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಇವರ ಈ ಕಾರ್ಯ ಇತರೇ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ” ಎಂದರು.

ಸಂಘದ ಸದಸ್ಯ ಪ್ರಜ್ವಲ್ ಶೆಟ್ಟಿ ಮಾತನಾಡಿ, “ನಾವು ಪ್ರಥಮ ಸಮಾಜೋಮುಖಿ ಸೇವೆಗಾಗಿ ನಮ್ಮನ್ನು ನಾವು ಹುಲಿವೇಷದ ಮೂಲಕ ತೊಡಗಿಸಿಕೊಳ್ಳುತ್ತಿದ್ದೇವೆ. ಹೆಚ್ಚಾಗಿ ವಿದ್ಯಾರ್ಥಿಗಳೇ ವೇಷ ಹಾಕಿದ್ದೇವೆಯಾದರೂ ಕೆಲ ಪ್ರದರ್ಶನಕ್ಕಾಗಿ ಮಂಗಳೂರಿನ ಹುಲಿವೇಷ ತಂಡದ ಆಯ್ದ ಸದಸ್ಯರನ್ನು ಕರೆಯಿಸಿಕೊಂಡಿದ್ದೇವೆ. ಸುಮಾರು ಹತ್ತು ಲಕ್ಷ ರೂಪಾಯಿ ಹೊಂದಿಸುವ ಗುರಿ ಹೊಂದಿದ್ದು, ವೇಷಭೂಷಣಕ್ಕಾಗಿ ಸುಮಾರು ಮೂರು ಲಕ್ಷ ರೂ ಖರ್ಚಾಗಲಿದ್ದು, ಉಳಿದ ಹಣವನ್ನು ಅರ್ಹರಿಗೆ ದೇಣಿಗೆ ನೀಡಲಿದ್ದೇವೆ” ಎಂದರು.