ಶಿರಸಿಯಲ್ಲಿ ಬೃಹತ್ ಮೌನ ಮೆರವಣಿಗೆ

ಶಿರಸಿ ವೈದ್ಯರು ಎಸಿಗೆ ಮನವಿ ಸಲ್ಲಿಸಿದರು

1 ದಿನ ಖಾಸಗಿ ಆಸ್ಪತ್ರೆ ಬಂದ್

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿಯ ಟಿ ಎಸ್ ಎಸ್ ವೈದ್ಯರ ಮೇಲೆ ಸಂಸದ ನಡೆಸಿದ ಹಲ್ಲೆ ಖಂಡಿಸಿ, ಶಿರಸಿಯ ವೈದ್ಯರು, ನರ್ಸುಗಳು,ಪ್ಯಾರಾ ಮೆಡಿಕಲ್ ಸಿಬ್ಬಂದಿ, ಔಷಧಿ ಅಂಗಡಿ ಪ್ರಮುಖರು, ಮೆಡಿಕಲ್ ಪ್ರತಿನಿಧಿಗಳ ಸಹಿತ 600ಕ್ಕೂ ಹೆಚ್ಚು ಜನರು ಶನಿವಾರ ಕೈಗೆ ಕಪ್ಪು ಪಟ್ಟಿ ಧರಿಸಿ ಟಿ ಎಸ್ ಎಸ್ ಆಸ್ಪತ್ರೆಯಿಂದ 4 ಕಿ ಮೀ ತನಕ ಮೌನ ಮೆರವಣಿಗೆ ನಡೆಸಿ ಶಿರಸಿ ಸಹಾಯಕ ಕಮಿಷನರಿಗೆ ಮನವಿ ಸಲ್ಲಿಸಿದರು.

ಹಲ್ಲೆಗೊಳಗಾದ ಡಾ ಮಧುಕೇಶ್ವರ, ಡಾ ಬಾಲು ಭಟ್ಟ ಸಹಿತ ನೂರಾರು ವೈದ್ಯರು, ನರ್ಸುಗಳು ಭಾಗವಹಿಸಿದ್ದರು. ಐಎಂಎ ಅಧ್ಯಕ್ಷ ಡಾ ಕೈಲಾಸ ಪೈ ಮನವಿ ಸಲ್ಲಿಸಿ, “ವೈದ್ಯರಿಗೆ ರಕ್ಷಣೆ ನೀಡಬೇಕು. ಹಲ್ಲೆ ಮಾಡಿದ ಸಂಸದರನ್ನು ತಕ್ಷಣ ಬಂಧಿಸಬೇಕು” ಎಂದು ಮನವಿ ಮಾಡಿದರು.

ವೈದ್ಯ ಸೇವೆ ಇರಲಿಲ್ಲ

ಶನಿವಾರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸೇವೆ ಇತ್ತಾದರೂ, ಕೆಲ ವೈದ್ಯರು ಅರ್ಧ ದಿನ ರಜೆ ಹಾಕಿ ಮೆರವಣಿಗೆಗೆ ಹೋಗಿದ್ದರು. ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಬೆಳಿಗ್ಗೆಯಿಂದಲೇ ಮೆರವಣಿಗೆಗೆ ಹೋಗಿದ್ದರಿಂದ ಸಂಜೆ ತನಕ ಸೇವೆ ಸ್ಥಗಿತಗೊಳಿಸಲಾಯಿತು. ಖಾಸಗಿ ವೈದ್ಯರ ಸೇವೆ ಪೂರ್ಣ ಒಂದು ದಿನ ಬಂದಾಗಿರುವದು ಇದೇ ಪ್ರಥಮ ಎನ್ನಲಾಗುತ್ತಿದೆ.