ಉಡುಪಿ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ಬೃಹತ್ ಪ್ರತಿಭಟನೆ

ಆಸ್ಪತ್ರೆಯ ಖಾಸಗೀಕರಣ ವಿರೋಧಿಸಿ ನಗರದಲ್ಲಿ ಬೃಹತ್ ರ್ಯಾಲಿ ನಡೆಸಿದ ಉಡುಪಿ ನಾಗರಿಕರು

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಅಲಂಕಾರ್ ಟಾಕೀಸ್ ಬಳಿ ಇರುವ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಅಬುಧಾಬಿ ಉದ್ಯಮಿ ಬಿ ಆರ್ ಶೆಟ್ಟಿ ಕಂಪನಿಗೆ ಲೀಸ್ ನೀಡುವ ಮೂಲಕ ರಾಜ್ಯ ಸರಕಾರವು ಆಸ್ಪತ್ರೆಯನ್ನು ಖಾಸಗೀಕರಣಗೊಳಿಸಿರುವುದನ್ನು ವಿರೋಧಿಸಿ, ಹಾಜಿ ಅಬ್ದುಲ್ಲಾ ಸರಕಾರಿ ಆಸ್ಪತ್ರೆ ಉಳಿಸಿ ನಾಗರಿಕರ ಒಕ್ಕೂಟದ ನೇತೃತ್ವದಲ್ಲಿ ನೂರಾರು ಸಾರ್ವಜನಿಕರು ಶುಕ್ರವಾರ ಸಂಜೆ ನಗರದ ಜೋಡುಕಟ್ಟೆಯಿಂದ ಬೃಹತ್ ರ್ಯಾಲಿ ನಡೆಸಿ, ನಗರದ ಚಿತ್ತರಂಜನ್ ಸರ್ಕಲ್ ಎದುರು ಪ್ರತಿಭಟನಾ ಸಭೆ ನಡೆಸಿದರು.

7udjany2

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಸಂಚಾಲಕ, ದೊಡ್ಡಣ್ಣಗುಡ್ಡೆ ಬಾಳಿಗಾ ಆಸ್ಪತ್ರೆಯ ವೈದ್ಯ ಪಿ ವಿ ಭಂಡಾರಿ ಮಾತನಾಡಿ, “ಉಡುಪಿಯ ಹಾಜಿ ಅಬ್ದುಲ್ಲಾ ಸಾಹೇಬರು ತನ್ನ ಜಾಗವನ್ನು ಬಡವರಿಗಾಗಿ ದಾನ ನೀಡುವ ಮೂಲಕ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಈ ಆಸ್ಪತ್ರೆಯನ್ನು ಬಿ ಆರ್ ಶೆಟ್ಟಿಗೆ ಕೊಟ್ಟಿದ್ದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಆಸ್ಪತ್ರೆಯ ಸಂಪೂರ್ಣ ಜವಾಬ್ದಾರಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸರ್ಜನಗೆ ವಹಿಸಬೇಕು. ಆಸ್ಪತ್ರೆಯಲ್ಲಿ ರಕ್ಷಾ ಸಮಿತಿ ಇದೆ. ಈ ಸಮಿತಿ ಮುಖ್ಯಸ್ಥ ಸ್ಥಾನವನ್ನು ಜಿಲ್ಲಾಧಿಕಾರಿಗೆ ನೀಡದೆ ಜಿಲ್ಲಾ ಉಸ್ತುವಾರಿ ಮಂತ್ರಿ ಅಥವಾ ಸ್ಥಳೀಯ ಶಾಸಕಗೆ ನೀಡಬೇಕು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳುವ ಶುಲ್ಕವನ್ನೇ ರೋಗಿಗಳಿಂದ ಪಡೆದುಕೊಳ್ಳಬೇಕು” ಎಂದು ಆಗ್ರಹಿಸಿದರು.

“ಬಡವರ ಆಸ್ಪತ್ರೆಯನ್ನು ಉಳಿಸಲು ಈಗಾಗಲೇ ಹಾಜಿ ಅಬ್ದುಲ್ಲಾ ಸಾಹೇಬರ ಸಂಬಂಧಿ ಖುರ್ಷಿದ್ ಅಹಮ್ಮದ್ ಹೈಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಆಸ್ಪತ್ರೆ ಉಳಿಸಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧ” ಎಂದು ಪಿ ವಿ ಭಂಡಾರಿ ಗುಡುಗಿದರು.

ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ಸರಕಾರಿ ಆಸ್ಪತ್ರೆಯನ್ನು ಶ್ರೀಮಂತರಿಗೆ  ನೀಡಿ ಬಡವರ ಹಕ್ಕಿನ ಸಮಾಧಿ ಮಾಡುವ ಅಮಾನವೀಯ ಕೃತ್ಯ ನಡೆದಿದೆ. ಇದು ಉಡುಪಿ ಜಿಲ್ಲಾ ಉಸ್ತುವಾರಿ ಕಮ್ ಶಾಸಕ ಪ್ರಮೋದ್‍ರ ರಾಜಕೀಯ ಬದುಕಿಗೆ ಮಾರಕವಾಗಲಿದೆ ಎಂದು ಕಿಡಿಕಾರಿದ್ದಾರೆ. ಪ್ರತಿಭಟನಾ ಸಭೆಯಲ್ಲಿ ಒಕ್ಕೂಟ ಸಹಸಂಚಾಲಕ ಫಣಿರಾಜ್, ಸಿಪಿಐಎಂನ ಬಾಲಕೃಷ್ಣ ಶೆಟ್ಟಿ, ಕವಿರಾಜ್, ದಲಿತ ಸಂಘರ್ಷ ಸಮಿತಿಯ ಸುಂದರ್ ಮಾಸ್ತರ್, ಸುಂದರ್ ಕಪ್ಪೆಟ್ಟು, ಶ್ಯಾಮರಾಜ್ ಬಿರ್ತಿ, ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಮೊದಲಾದವರು ಇದ್ದರು.