ಉಳ್ಳಾಲದಲ್ಲಿನ ಅಪರಾಧ ಕೃತ್ಯಗಳ ತಡೆಗೆ ಮಾನವ ಹಕ್ಕು ಸಮಿತಿ ನಿಗಾ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕೋಮುಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿರುವ ಉಳ್ಳಾಲ ಆಸುಪಾಸಿನಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ, ಗಲಭೆಗಳು ಮತ್ತೆ ಮತ್ತೆ ಮರುಕಳಿಸುತ್ತಿರುವುದರಿಂದ ಮಾನವ ಹಕ್ಕುಗಳ ಸಮಿತಿ (ಎಚ್ ಆರ್ ಸಿ) ಇಲ್ಲಿ ಇನ್ನು ಮುಂದೆ ನಿಗಾ ಇರಿಸಲಿದೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಹಲವು ಕಡೆಗಳಲ್ಲಿ ಇತ್ತೀಚಿನ ಕೆಲವು ದಿನಗಳಲ್ಲಿ ಅಹಿತಕರ ಘಟನೆಗಳು ನಿರಂತರವಾಗಿದ್ದವು. ಕೊಲೆ, ಕೊಲೆಯತ್ನ, ಹಲ್ಲೆ, ಕಿಡ್ಯಾಪ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಆಯೋಗವು ಇನ್ನು ಮುಂದೆ ಇಲ್ಲಿ ಪ್ರತ್ಯೇಕ ನಿಗಾ ಇರಿಸಲು ನಿರ್ಧರಿಸಿದೆ.

ಪತ್ರಕರ್ತರೊಂದಿಗೆ ಮಾತನಾಡಿದ ಮಾನವ ಹಕ್ಕುಗಳ ರಾಜ್ಯಾಧ್ಯಕ್ಷ ಜೋಜೋ ಕೆ ಜೋಸೆಫ್, “ಸಮಿತಿಯ ಮುಖ್ಯ ಉದ್ದೇಶವೇ ಸಾರ್ವಜನಿಕರಿಗೆ ಭದ್ರತೆ ಒದಗಿಸುವುದು. ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವಾಗ ಅವರಿಗೆ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗುತ್ತಿದೆ. ಈ ಸಂದರ್ಭದಲ್ಲಿ ನಾವು ನಮ್ಮದೇ ರೀತಿಯಲ್ಲಿ ಗಲಭೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತೇವೆ. 6 ಗಂಟೆಯ ಬಳಿಕ ಮಹಿಳೆಯರು ಮನೆಯಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದರೆ ನಾವು ಅವರಿಗೆ ರಕ್ಷಣೆ ನೀಡಬೇಕಾದ ಅಗತ್ಯವಿದೆ. ಈ ಸಂದರ್ಭ ಮಾನವ ಹಕ್ಕುಗಳ ಸಮಿತಿಯ ರಕ್ಷಣೆ ನೀಡಲು ಮುಂದಾಗುತ್ತದೆಯಲ್ಲದೇ ಭವಿಷ್ಯದಲ್ಲಿ ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತದೆ” ಎಂದರು.

“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳಿಗೆ ದಾಸರಾಗುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇವುಗಳಿಂದಲೇ ಅಪರಾಧ ಪ್ರಕರಣಗಳೂ ಹೆಚ್ಚಾಗುತ್ತಿವೆ. ಹೀಗಾಗಿ ನಮ್ಮ ಸಮಿತಿಯು ಜಿಲ್ಲೆಯಾದ್ಯಂತ ಜನವರಿ ತಿಂಗಳಿನಿಂದ ಆ್ಯಂಟಿ ಡ್ರಗ್ ಕ್ಯಾಂಪುಗಳನ್ನು ನಡೆಸಲಿದೆ. ಎಲ್ಲಾ ವರ್ಗದ ಜನರಿಗೂ ಉಚಿತ ಅಂಬುಲೆನ್ಸ್ ನೀಡಲು ನಾವು ನಿರ್ಧರಿಸಿದ್ದೇವೆ” ಎಂದರು.

“ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸಹಭಾಗಿತ್ವದಲ್ಲಿ ಉಚಿತ ರಕ್ತದಾನ ಶಿಬಿರವನ್ನು ಡಿ 10ರಂದು ತೊಕ್ಕೊಟ್ಟಿನ ಕ್ಲಿಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಭಿನ್ನಸಾಮಥ್ರ್ಯದವರಿಗೆ ವ್ಹೀಲ್ ಚೇರ್, ಅನಾಥರಿಗೆ ಹಾಸಿಗೆಗಳನ್ನು ನೀಡಲಾಗುವುದು” ಎಂದರು.