ಶೀಘ್ರವೇ ಹಕ್ಕು ಆಯೋಗದಿಂದ ಆನಲೈನ್ ದೂರು ಸ್ವೀಕಾರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜ್ಯ ಮಾನವ ಹಕ್ಕುಗಳ ಆಯೋಗವು ಬದಲಾವಣೆಗಳಿಗೆ ಆಸಕ್ತಿ ತೋರಿಸಿದ್ದು, ಜನವರಿ ತಿಂಗಳಿಂದ ಜನರಿಂದ ಆನಲೈನ್ ದೂರುಗಳನ್ನು ಸ್ವೀಕರಿಸಲು ಎಲ್ಲಾ ಸಿದ್ದತೆಗಳನ್ನು ನಡೆಸುತ್ತಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಆಯೋಗದ ಕಾರ್ಯದರ್ಶಿ ಮಧು ಶರ್ಮಾ, ಆಯೋಗವು ಆನ್‍ಲೈನ್ ದೂರು ದಾಖಲು ಸೌಲಭ್ಯವನ್ನು ಜಾರಿಗೊಳಿಸಲಿದೆ ಎಂದು ಹೇಳಿದ್ದಾರೆ. ನೂತನವಾಗಿ ಜಾರಿಗೊಳಿಸಲಾಗಿರುವ ಸೌಲಭ್ಯದಲ್ಲಿ ಯಂತ್ರ ಆಫ್ ಲೈನ್‍ನಲ್ಲಿದ್ದಾಗಲೂ ದೂರುಗಳನ್ನು ಸ್ವೀಕರಿಸುತ್ತದೆ, ಪ್ರತಿದಿನ ಸರಾಸರಿ 30ರಿಂದ 40 ದೂರುಗಳು ಬರುತ್ತಿವೆ ಎಂದರು. ಪೊಲೀಸ್ ಇಲಾಖೆಯ ಬಗ್ಗೆ ಬೆಟ್ಟು ಮಾಡಿದ ಅವರು, “ಆಯೋಗವು ಪೊಲೀಸರ ವಿರುದ್ದ ಶೇಕಡಾ 50 ದೂರುಗಳು ಬರುತ್ತಿದ್ದು, ಶಿಕ್ಷೆ, ಅಕ್ರಮ ಒತ್ತೆಯಾಳು, ಕೆಟ್ಟ ವರ್ತನೆ ಮತ್ತು ಬಂಧನಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿದೆ. ಆದರೆ ಎಲ್ಲಾ ದೂರುಗಳು ಸತ್ಯವಾದುದಲ್ಲ. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪೊಲೀಸ್ ಸಿಬ್ಬಂದಿಗಳಲ್ಲಿ ಅದ್ಭುತವಾದ ಬದಲಾವಣೆ ಕಂಡುಬಂದಿದೆ. ಆಯೋಗದಲ್ಲಿರುವ ತರಬೇತಿ ತರಗತಿಗಳಿಗೆ ಹಾಜರಾದ ಬಳಿಕ ಅವರಲ್ಲಿ ಹೆಚ್ಚಿನ ಮಾನವೀಯತೆ ಕಂಡುಬಂದಿದೆ” ಎಂದು ತಿಳಿಸಿದ್ದಾರೆ.