ಹೆಂಡತಿಯನ್ನು ಹೇಗೆ ಖುಶಿಯಾಗಿರಿಸಲಿ?

ಪ್ರ : ಅವಳ ಅಂದಚೆಂದಕ್ಕೆ ಆಕರ್ಷಿತನಾಗಿ, ಅವಳ ಮಾತಿನ ಮೋಡಿಯ ಸೆಳೆತಕ್ಕೆ ಒಳಗಾಗಿ ಅವಳನ್ನು ಪ್ರೀತಿಸಿದೆ. ಅವಳನ್ನು ಪಡೆಯಲು ಬೇಕಷ್ಟು ಕಸರತ್ತು ನಡೆಸಿದ್ದೂ ನಿಜ. ಅಂತೂ ಅವಳು ನನ್ನ ಪ್ರೀತಿ ಒಪ್ಪಿಕೊಂಡಳು. ಸಾಧಾರಣ ರೂಪಿನ ನನ್ನನ್ನು ಅವಳು ವರಿಸಲು ಒಪ್ಪಿಕೊಂಡಿದ್ದೇ ನನ್ನ ಭಾಗ್ಯ ಅಂತ ತಿಳಿದುಕೊಂಡು ಅಮ್ಮ, ಅಪ್ಪ ವಿರೋಧಿಸಿದರೂ ಅವಳನ್ನು ಮದುವೆಯಾದೆ. ನನ್ನ ಮದುವೆಗೆ ನನ್ನ ಕಡೆಯಿಂದ ತಮ್ಮ ಮಾತ್ರ ಬಂದಿದ್ದ. ಈಗ ಮದುವೆಯಾಗಿ ಮೂರು ವರ್ಷಗಳಾದವು. ಅಪ್ಪ, ಅಮ್ಮನಿಗೆ ನನ್ನ ಬಗ್ಗೆ ಅಸಮಾಧಾನವಿದ್ದರೂ ಮಗನನ್ನು ಕಳೆದುಕೊಳ್ಳಬಾರದೆಂದು ನಮ್ಮನ್ನು ಕ್ಷಮಿಸಿದ್ದಾರೆ. ಆಗಾಗ ಮನೆಗೂ ಹೋಗಿಬರುತ್ತಿದ್ದೇವೆ. ಉಳಿದ ಸಮಸ್ಯೆಯೆಲ್ಲವೂ ಬಗೆಹರಿದರೂ ನನಗೀಗ ಹೆಂಡತಿಯನ್ನು ಖುಶಿಯಿಂದಿಡುವುದೇ ದೊಡ್ಡ ತಲೆನೋವಾಗಿದೆ. ನಾನು ಕೆಳಮಧ್ಯಮ ವರ್ಗದಿಂದ ಬಂದಿದ್ದರೂ ಅವಳಿಗಾಗಿ ಹೈಕ್ಲಾಸ್ ಜೀವನ ನಡೆಸಲು ಕೈಮೀರಿ ಪ್ರಯತ್ನಿಸುತ್ತಿದ್ದೇನೆ. ಅವಳು ದುಡಿದರೂ ಅವಳ ದುಡಿಮೆಯೆಲ್ಲವೂ ಅವಳ ಡ್ರೆಸ್ ಮತ್ತು ಕಾಸ್ಮೆಟಿಕ್ಸಿಗೇ ಖರ್ಚಾಗುತ್ತದೆ. ಅವಳಿಗೆ ಎಲ್ಲವೂ ಬ್ರಾಂಡೆಡ್ಡೇ ಬೇಕು. ಬೆಲೆಬಾಳುವ ವಾಚಸ್, ಗಾಗಲ್ಸ್, ಶೂ ಎಲ್ಲವೂ ವೆರೈಟೀಸ್ ಇರಬೇಕು. ನಾನೂ ಅದೇ ರೀತಿ ಇರಬೇಕೆಂದೂ ಬಯಸುತ್ತಾಳೆ. ಎಲ್ಲ ಖರ್ಚನ್ನು ತೂಗಿಸಿಕೊಂಡು ಅವಳ ಬೇಕು ಬೇಡಗಳನ್ನು ಪೂರೈಸುವಷ್ಟರಲ್ಲಿ ಪೈಸಾ ಉಳಿಯುವುದಿಲ್ಲ. ಪ್ರತೀ ವಾರ ಬಿಡುಗಡೆಯಾದ ಸಿನಿಮಾವನ್ನು ಮಾಲಿಗೇ ಹೋಗಿ ನೋಡಬೇಕು. ದೊಡ್ಡ ಹೊಟೇಲಿನಲ್ಲಿಯೇ ತಿನ್ನಬೇಕು. ಅವಳ ಆಸೆಗೆ ಮಣಿದು ಈಗ ಕಾರು ತೆಗೆದುಕೊಂಡಿದ್ದೇನೆ. ಅದರ ಇಎಂಐ ಭರಿಸಲು ನಾನೀಗ ಎಕ್ಸ್ಟ್ರಾ ಡ್ಯೂಟಿ ಮಾಡುತ್ತಿದ್ದೇನೆ. ಆದರೂ ಅವಳ ಬೇಡಿಕೆ ನಿಂತಿಲ್ಲ. ಅವಳನ್ನು ತೃಪ್ತಿ ಪಡಿಸಲು ನಾನು ಇನ್ನೇನು ಮಾಡಬೇಕು? ಸ್ವಂತ ಮನೆಯಾಗುವವರೆಗೆ ಮಗು ಬೇಡ ಅನ್ನುತ್ತಿದ್ದಾಳೆ. ಅದೆಲ್ಲ ನನ್ನಿಂದ ಸಾಧ್ಯವಾ ಅಂತ ಒಮ್ಮೊಮ್ಮೆ ಖಿನ್ನನಾಗುತ್ತಿದ್ದೇನೆ. ಸಲಹೆ ಕೊಡುವಿರಾ?

ಉ : ಎಲ್ಲದಕ್ಕೂ ಒಂದು ಮಿತಿಯಿದೆ. ಹಾಸಿಗೆಯಿದ್ದಷ್ಟೇ ಕಾಲು ಚಾಚು ಅಂತ ಹಿರಿಯರು ಹೇಳಿದ್ದರೂ ಈಗಿನ ಕಾಲದ ಹುಡುಗರು ಕಾಲು ಇದ್ದಕ್ಕಿಂತ ಉದ್ದದ ಹಾಸಿಗೆಯನ್ನೇ ಬಯಸುತ್ತಾರೆ. ಕೊಳ್ಳುಬಾಕ ಸಂಸ್ಕøತಿ ಅತಿಯಾಗಿದೆ. ಸಾಲ ಮಾಡಿಯಾದರೂ ತುಪ್ಪ ತಿನ್ನು ಅನ್ನುವ ಪಾಶ್ಚಿಮಾತ್ಯ ಧೋರಣೆ ನಮ್ಮ ಯುವಕರಲ್ಲಿ ಅತಿಯಾಗುತ್ತಿದೆ. ನೀವು ಹುಡುಗಿಯ ಅಂದ, ಮಾತಿನಲ್ಲಿನ ವೈಯಾರಕ್ಕೆ ಬಿದ್ದು ಅವಳ ಅಸಲೀ ಗುಣದ ಕಡೆ ಗಮನ ಹರಿಸದೇ ನೀವಾಗಿಯೇ ಮೇಲೆಬಿದ್ದು ಅವಳನ್ನು ಮದುವೆಯಾದಿರಿ. ಬಿಸಿ ತುಪ್ಪ, ನುಂಗಲೂ ಆಗದೇ ಉಗುಳಲೂ ಆಗದೇ ಸಂಕಟ ಪಡುತ್ತಿದ್ದೀರಿ. ಆದರೂ ಪ್ರೀತಿಸಿ ಮದುವೆಯಾದೆ ಅಂದ ಮಾತ್ರಕ್ಕೆ ಹೆಂಡತಿಯ ತಾಳಕ್ಕೆ ಸರಿಯಾಗಿ ಕುಣಿಯಬೇಕೆಂದಿಲ್ಲ. ನಿಮ್ಮ ವಿವೇಚನೆಗೂ ಅವಳು ಬೆಲೆಕೊಡಲಿ. ಒಳ್ಳೆಯ ಜೀವನ ಬಯಸುವುದು ತಪ್ಪಲ್ಲವಾದರೂ ತಮ್ಮ ಲಿಮಿಟ್ ಏನು ಅಂತ ಅರ್ಥಮಾಡಿಕೊಳ್ಳದಿದ್ದರೆ ಮುಂದೆ ಕಷ್ಟಕ್ಕೆ ಸಿಲುಕಿಕೊಂಡರೆ ಯಾರು ಸಹಾಯ ಮಾಡುತ್ತಾರೆ? ನೀವು ಅವಳನ್ನು ಕೂರಿಸಿಕೊಂಡು ಎಲ್ಲಕ್ಕೂ ಒಂದು ಬಜೆಟ್ ಅಂತ ಮಾಡಿ. ದುಡಿದ ಸ್ವಲ್ಪ ಭಾಗವನ್ನಾದರೂ ಉಳಿತಾಯ ಮಾಡದಿದ್ದರೆ ಮುಂದೆ ವೈದ್ಯಕೀಯ ಖರ್ಚು ಬಂದರೆ ಭರಿಸುವವರು ಯಾರು? ಅವಳು ಹೇಳಿದ ಹಾಗೆ ಕೇಳಿ ಅವಳ ಬೇಡಿಕೆಗಳನ್ನೆಲ್ಲ ಈಡೇರಿಸುತ್ತಾ ಹೋದರೆ ಈಗ ನೀವು ಅವಳನ್ನು ತಾತ್ಕಾಲಿಕವಾಗಿ ಖುಶಿಯಲ್ಲಿಡಬಹುದಷ್ಟೇ. ಜೀವನಪೂರ್ತಿ ತಲೆಬಿಸಿ ಇಲ್ಲದೇ ಇರಬೇಕಾದರೆ ಸ್ವಲ್ಪವಾದರೂ ಪ್ಲಾನಿಂಗ್ ಬೇಕಾಗುತ್ತದೆ. ಅದು ಡ್ರೈವಿಂಗ್ ಸೀಟಿನಲ್ಲಿರುವ ನಿಮ್ಮ ಜವಾಬ್ದಾರಿ ಕೂಡಾ.