ಸ್ನೇಹಿತೆಯನ್ನು ಅವರಿಂದ ಹೇಗೆ ದೂರ ಇಡಲಿ ?

ಪ್ರ : ನನಗೀಗ 28 ವರ್ಷ. ಮದುವೆಯಾಗಿ ನಾಲ್ಕು ವರ್ಷಗಳಾದವು. ಒಂದು ವರ್ಷದ ಮಗಳಿದ್ದಾಳೆ. ನಮ್ಮವರು ಟೆಲಿಫೋನ್ಸ್ ಡಿಪಾರ್ಟ್‍ಮೆಂಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ಸಾಲಮಾಡಿ ನಾವು ಹೊಸ ಫ್ಲಾಟ್ ಖರೀದಿಸಿದೆವು. ನಮ್ಮ ಅಪಾರ್ಟ್‍ಮೆಂಟಿನಲ್ಲೇ ನನ್ನ ಕಾಲೇಜಿನ ಗೆಳತಿಯೂ ವಾಸಿಸುತ್ತಿದ್ದಾಳೆ. ಅವಳಿಗಿನ್ನೂ ಮದುವೆಯಾಗಿಲ್ಲ. ಅವಳು ಹೊಟೇಲ್ ಒಂದರಲ್ಲಿ ರಿಸೆಪ್ಷನ್ ಕೆಲಸ ಮಾಡುತ್ತಿದ್ದಾಳೆ. ಅವಳು ಇಲ್ಲಿ ಒಬ್ಬಳೇ ಇರುವುದು. ಸಮಯ ಸಿಕ್ಕಾಗೆಲ್ಲ ಅವಳು ನಮ್ಮ ಮನೆಗೆ ಬರುತ್ತಾಳೆ. ಮೊದಲೆಲ್ಲ ನನಗೆ ಅವಳ ಕಂಪೆನಿ ಸಿಕ್ಕ ಬಗ್ಗೆ ಖುಶಿಯಾಗುತ್ತಿತ್ತು. ಆದರೆ ಈಗೀಗ ಅವಳನ್ನು ಯಾಕಾದರೂ ಹಚ್ಚಿಕೊಂಡೆನೋ ಅನಿಸುತ್ತಿದೆ. ನಾನು ಸ್ವಲ್ಪ ಮಿತಭಾಷಿ. ನನ್ನ ಗಂಡನಿಗೆ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವ ಗುಣ. ನನ್ನ ಗೆಳತಿಯದೂ ಬಿಂದಾಸ್ ನೇಚರ್. ಮೊದಲಿನಿಂದಲೂ ಸ್ವತಂತ್ರ ಪ್ರವೃತ್ತಿಯವಳು. ಮಾಡ್ ಡ್ರೆಸ್ ಮಾಡುವುದು ಅವಳಿಗಿಷ್ಟ. ನಮ್ಮ ಮನೆಗೆ ಬರುವಾಗಲೂ ಅಷ್ಟೇ. ತೊಡೆ ಕಾಣುವ ಬರ್ಮುಡ, ಬಿಗಿ ಟೀಶರ್ಟಿನಲ್ಲಿ ಬರುತ್ತಾಳೆ. ಅವಳು ಅಂತಹ ಡ್ರೆಸ್ಸಿನಲ್ಲಿ ನನ್ನ ಗಂಡನ ಎದುರು ಕುಳಿತು ಸಂಕೋಚವಿಲ್ಲದೇ ಮಾತಾಡುವಾಗ ನನಗೆ ಕಸಿವಿಸಿಯಾಗುತ್ತದೆ. ಅವಳು ಬಂದಾಕ್ಷಣ ನಮ್ಮವರ ಮುಖವೂ ಮೊರದಗಲವಾಗುತ್ತದೆ. ಇಬ್ಬರೂ ಹರಟೆಹೊಡೆಯುವುದರಲ್ಲಿ ನಿಸ್ಸೀಮರು. ನಾನು ಅವರಿಗೆ ಬೇಕೆಂದಾಗ ಕಾಫಿ, ಈರುಳ್ಳಿ ಬಜ್ಜಿ ಕೊಟ್ಟು ಮೂಕ ಪ್ರೇಕ್ಷಕಳಾಗಿ ಕೂರಬೇಕು. ಒಂದು ದಿನ ಅವಳು ಬರದಿದ್ದರೂ ನಮ್ಮವರು ರೆಸ್ಟ್‍ಲೆಸ್. ಮೊದಲೆಲ್ಲ ಗಂಡ ನನ್ನನ್ನು ಮತ್ತು ಮಗುವನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದರು. ಈಗೀಗ ಏನಾದರೂ ಸಬೂಬು ಹೇಳಿ ಮನೆಯಲ್ಲೇ ಇದ್ದು ಅವಳಿಗಾಗಿ ಕಾಯುತ್ತಿರುವಂತೆ ಅನಿಸುತ್ತಿದೆ. ಅವಳ ಜೊತೆ ಬೇರೆ ರೀತಿಯ ರಿಲೇಶನ್‍ಶಿಪ್ ಬೆಳೆದರೆ ಅನ್ನುವ ಹೆದರಿಕೆಯೂ ಆಗುತ್ತಿದೆ. ಒಂದು ರೀತಿಯ ಅಸುರಕ್ಷತೆ ಭಾದಿಸುತ್ತಿದೆ. ಹೇಗೆ ಅವಳನ್ನು ಗಂಡನಿಂದ ದೂರ ಇಡಲಿ?

: ನೀವು ಅವಳಿಗೆ ಕೊಟ್ಟ ಸಲುಗೆ ಈಗ ನಿಮ್ಮನ್ನೇ ಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಸ್ನೇಹಿತರನ್ನು ಅತಿಯಾಗಿ ಹಚ್ಚಿಕೊಂಡರೆ ಆಗುವ ಕತೆಯೇ ಇಂತದ್ದು. ಹುಡುಗ ಆಗಲೀ ಹುಡುಗಿಯಾಗಲೀ ಮದುವೆಗಿಂತ ಮೊದಲು ಫ್ರೆಂಡ್ಸ್ ಜೊತೆ ಇದ್ದ ರೀತಿಯಲ್ಲೇ ನಂತರವೂ ಮುಂದುವರಿಯುವುದು ಅಷ್ಟೊಂದು ಸಮಂಜಸವಲ್ಲ. ಅಪರೂಪಕ್ಕೊಮ್ಮೆ ಗೆಳೆಯ/ಗೆಳತಿಯ ಮನೆಗೆ ಹೋದರೆ ಪರವಾಗಿಲ್ಲ. ಹೀಗೆ ಅವಳು ಪ್ರತೀದಿನ ನಿಮ್ಮ ಮನೆಗೆ ಬಂದು ನಿಮ್ಮ ಪ್ರೈವೆಸಿಯನ್ನು ಕೆಡಿಸುವುದು ಖಂಡಿತ ತಪ್ಪು. ಅದನ್ನು ಆಕೆಯೇ ತಿಳಿದುಕೊಳ್ಳಬೇಕಿತ್ತು. ನಿಮ್ಮ ಗಂಡನ ಅತ್ಯುತ್ಸಾಹದಿಂದ ಅವಳು ಮತ್ತಿಷ್ಟು ಉತ್ತೇಜಿತಳಾಗಿರಬಹುದು. ಈಗ ನಿಮ್ಮಿಬ್ಬರ ಮಧ್ಯೆಯೇ ಅವಳು ಬರುತ್ತಿದ್ದಾಳೆ ಅಂದರೆ ನೀವು ಈಗಲಾದರೂ ಎಚ್ಚೆತ್ತುಕೊಳ್ಳಲೇ ಬೇಕು. ಕೆಲವು ಗಂಡಸರಿಗೆ ಬೇರೆ ಹೆಂಗಸರ ಜೊತೆ ಮಾತಾಡುವುದೆಂದರೆ ಎಲ್ಲಿಲ್ಲದ ಆಸಕ್ತಿ. ನಿಮ್ಮ ಗಂಡನೂ ಅದೇ ಕೆಟಗರಿಯವರಾದ್ದರಿಂದ ನೀವು ಸ್ವಲ್ಪ ಹುಶಾರಾಗಲೇಬೇಕು. ಆಕೆ ನಿಮ್ಮ ಗೆಳತಿಯೇ ಆಗಿದ್ದರೂ ಯಾವುದಾದರೂ ಕಾರಣ ಹೇಳಿ ಅವಳನ್ನು ಹೆಚ್ಚು ನಿಮ್ಮ ಮನೆಗೆ ಬರದಂತೆ ನೋಡಿಕೊಳ್ಳಿ. ಅವಳು ಪದೇ ಪದೇ ಬರುವುದು ನಿಮಗಿಷ್ಟವಿಲ್ಲ ಅಂತ ನಿಮ್ಮ ನಡೆನುಡಿಯಲ್ಲಿ ಇಂಡೈರೆಕ್ಟಾಗಿ ಅವಳಿಗೆ ಅರ್ಥವಾಗುವಂತೆ ಮಾಡಿ. ನಿಮ್ಮ ಪತಿ ಮನೆಗೆ ಬರುವ ಹೊತ್ತಿಗೆ ನೀವು ಮಗುವಿನ ಜೊತೆ ಹೊರಗೆ ಹೋಗಲು ರೆಡಿಯಾಗಿರಿ. ಅವರನ್ನು ಹೇಗಾದರೂ ಪೂಸಿ ಮಾಡಿ ಹೊರಗೆ ಕರೆದುಕೊಂಡು ಹೋಗಿ. ಅವರ ಜೊತೆ ಏಕಾಂತವಾಗಿ ಕಳೆಯುವ ಬಯಕೆಯನ್ನು ವ್ಯಕ್ತಪಡಿಸಿ. ನೀವೂ ಲವಲವಿಕೆಯಿಂದ ಇದ್ದು ಗಂಡನೂ ನಿಮ್ಮ ಕಂಪೆನಿಯಲ್ಲಿ  ಖುಶಿಯಾಗಿರುವಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ಸಂಗಾತಿ ತುಂಬಾ ಬೋರಿಂಗ್ ಅಥವಾ ಕಿರಿಕಿರಿ ಗುಣದವರಾಗಿದ್ದರೆ ಅಂತವರಿಂದ ದೂರ ಇರಲು ಬಯಸುವುದು ಮಾನವಸಹಜ ಗುಣ. ಅದಕ್ಕೆ ನೀವು ಅವಕಾಶ ಕೊಡದೇ ನಿಮ್ಮವರನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ.