ಹೆಂಡತಿಯನ್ನು ಹೇಗೆ ಸಂಭಾಳಿಸಲಿ?

ಪ್ರ : ನನಗೆ ಮದುವೆಯಾಗಿ ಎರಡು ವರ್ಷಗಳಾದವು. ನಮ್ಮದು ಲವ್-ಮ್ಯಾರೇಜ್. ಅವಳು ನನ್ನ ಅಸಿಸ್ಟೆಂಟಾಗಿ ಕೆಲಸ ಮಾಡುತ್ತಿದ್ದಳು. ದಿನಕ್ಕೊಂದು ಡ್ರೆಸ್ ತೊಟ್ಟು ನಗುತ್ತಾ ಬರುವ ಅವಳನ್ನು ನೊಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಅಷ್ಟೇ ಸ್ನೇಹಜೀವಿ ಕೂಡಾ. ಮಾತಿನಲ್ಲೇ ಎಲ್ಲರನ್ನೂ ಸೆಳೆಯಬಲ್ಲ ಸೂಜಿಗಲ್ಲಿನ ವ್ಯಕ್ತಿತ್ವ. ಹಲವರು ಅವಳ ಕುಡಿನೋಟಕ್ಕೆ ಹಾತೊರೆಯುತ್ತಿದ್ದರೂ ಅವಳು ಗಂಭೀರ ಸ್ವಭಾವದವನಾದ ನನ್ನ ಸ್ನೇಹವನ್ನೇ ಬಯಸಿದಳು. ನಾನಾಯಿತು, ನನ್ನ ಕೆಲಸವಾಯಿತು ಅಂತ ನನ್ನಷ್ಟಕ್ಕೇ ಇದ್ದ ನನ್ನ ಮನಸ್ಸನ್ನೂ ವಿಚಲಿತಗೊಳಿಸಿಬಿಟ್ಟಳು. ಅವಳಿಗೆ ಯಾವ ವಿಷಯವೂ ಮುಚ್ಚಿಟ್ಟು ಗೊತ್ತಿಲ್ಲ. ತಾನು ಹಿಂದೆ ಒಬ್ಬನನ್ನು ಪ್ರೀತಿಸಿದ್ದೂ ಅವನು ಕೈಕೊಟ್ಟು ವಿದೇಶಕ್ಕೆ ಹೋಗಿದ್ದೂ ಎಲ್ಲವನ್ನೂ ಹೇಳಿದ್ದಳು. ಇಬ್ಬರೂ ಒಬ್ಬರ ಕಷ್ಟಸುಖವನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಷ್ಟು ಕ್ಲೋಸ್ ಆದೆವು. ನಾನು ಕೆಳಮಧ್ಯಮ ವರ್ಗಕ್ಕೆ ಸೇರಿದವನು ಅಂತ ಗೊತ್ತಾಗಿಯೂ ನನ್ನನ್ನು ಮದುವೆಯಾಗಲು ಸಿದ್ಧಳಾದಳು. ನನಗೂ ಅವಳಿಲ್ಲದೇ ಬದುಕುವುದು ದುಸ್ತರವೆನಿಸಿತು. ಮನೆಯವರನ್ನು ಕಷ್ಟಪಟ್ಟು ಒಪ್ಪಿಸಿ ಮದುವೆಯಾದೆವು. ಆದರೆ ಈಗ ಅವಳನ್ನು ಸಂಭಾಳಿಸುವುದೇ ಕಷ್ಟವಾಗಿದೆ. ಅವಳದೆಲ್ಲ ಹೈಕ್ಲಾಸ್ ಜೀವನಶೈಲಿ. ಅವಳ ತಂದೆಯ ಮನೆಯವರು ಅಷ್ಟೇನೂ ಶ್ರೀಮಂತರಲ್ಲದಿದ್ದರೂ ಮಗಳಿಗೆ ಎಂದೂ ಕೊರತೆ ಮಾಡಿರಲಿಲ್ಲ. ಪ್ರತೀ ಸಿನಿಮಾವನ್ನು ಮಾಲ್‍ಗೆ ಹೋಗಿಯೇ ನೋಡುವುದು, ದೊಡ್ಡ ರೆಸ್ಟಾರೆಂಟಿನಲ್ಲೇ ಆಗಾಗ ಹೊಸಹೊಸ ತಿಂಡಿಗಳನ್ನು ಸವಿಯುವುದು, ಆಗಾಗ ಶಾಪಿಂಗಿಗೆ ಹೋಗಿ ಕಣ್ಣಿಗೆ ಕಂಡಿದ್ದೆಲ್ಲವನ್ನೂ ಖರೀದಿಸುವುದು ಅವಳ ಹಾಬಿ. ಅದಕ್ಕೆಲ್ಲ ತಡೆಯೊಡ್ಡಿದರೆ ತುಂಬಾ ಬೇಸರ ಪಟ್ಟುಕೊಳ್ಳುತ್ತಾಳೆ. ಅವಳಿಗೆ ಅಸ್ತಮಾ ಸಮಸ್ಯೆಯಿರುವುದರಿಂದ ಹೆಚ್ಚಿನ ಸಮಯ ಲೀವ್‍ನಲ್ಲೇ ಇರುವುದರಿಂದ ಅವಳ ಕೈಗೆ ಸಿಗುವ ಸಂಬಳ ತುಂಬಾ ಕಡಿಮೆ. ನನ್ನ ದುಡಿತದಲ್ಲಿ ಕಾಲಂಶ ನನ್ನ ಕುಟುಂಬಕ್ಕೂ ಕೊಡಬೇಕಿದ್ದರಿಂದ ನನಗೆ ಸಂಸಾರವನ್ನು ಮ್ಯಾನೇಜ್ ಮಾಡುವುದೇ ಕಷ್ಟವಾಗಿದೆ. ಕೆಲವೊಮ್ಮೆ ಸಾಲ ಕೂಡಾ ಮಾಡಬೇಕಾಗುತ್ತದೆ. ಹೆಂಡತಿಯನ್ನು ಸಂತಸದಲ್ಲಿಡಬೇಕೆನ್ನುವ ಇರಾದೆ ನನ್ನದಾದರೂ ಅವಳ ಇಷ್ಟವನ್ನೆಲ್ಲ ಪೂರೈಸುವುದು ಅಸಾಧ್ಯವೆನಿಸಿದೆ. ಹೇಗೆ ಸಂಭಾಳಿಸಲಿ ಅವಳನ್ನು?

: ಅವಳ ಜೀವನಕ್ರಮ, ಇಷ್ಟಾನಿಷ್ಠ ಎಲ್ಲವೂ ಗೊತ್ತಿದ್ದೂ ಅವಳನ್ನು ವರಿಸಿದಿರಿ. ಈಗ ಅನುಭವಿಸುತ್ತಿದ್ದೀರಿ. ಕೆಲವು ಹುಡುಗಿಯರಿಗೆ ಬೇಕೋ ಬೇಡವೋ ಎಲ್ಲವನ್ನೂ ಖರೀದಿಸುವ ಹುಚ್ಚು. ದುಬಾರಿ ಹೊಟೇಲಿನಲ್ಲಿ ತಿಂದರೆ ಮಾತ್ರ ಸಮಾಧಾನ. ಇದ್ದುದರಲ್ಲೇ ತೃಪ್ತಿ ಪಟ್ಟುಕೊಳ್ಳುವ ಜಾಯಮಾನ ಅವರದ್ದಲ್ಲ. ಅವರ ತಾಳಕ್ಕೆ ಸರಿಯಾಗಿ ಮೊದಲು ಅಪ್ಪ, ಈಗ ಗಂಡನೂ ಕುಣಿಯುವವರು ಸಿಕ್ಕಿದರೆ ಅವರು ಮತ್ತಿಷ್ಟು ಕೊಳ್ಳುಬಾಕರಾಗುತ್ತಾರೆ. ಮೊದಲು ನೀವು ಸ್ವಲ್ಪ ಸ್ಟ್ರಿಕ್ಟಾಗುವುದು ಅನಿವಾರ್ಯ. ನಿಮಗೆ ಬರುವ ಆದಾಯದಲ್ಲೇ ಮನೆತೂಗಿಸಿಕೊಂಡು ಹೋಗಲು ಪ್ರತಿಯೊಂದಕ್ಕೂ ಬಜೆಟ್ ಹಾಕಿಕೊಳ್ಳಿ. ಅವಳಿಗೂ ನಿಮಗೆ ಬರುವ ಆದಾಯ ಮತ್ತು ಖರ್ಚಿನ ವಿವರವನ್ನೆಲ್ಲ ಕೊಡಿ. ಆದಾಯದ ಸ್ವಲ್ಪ ಭಾಗವನ್ನಾದರೂ ಉಳಿತಾಯ ಮಾಡದಿದ್ದರೆ ಮುಂದೆ ನಿಮ್ಮ ಸಂಸಾರ ಬೆಳೆದಾಗ ಕಷ್ಟವಾಗುತ್ತದೆ ಅಂತ ಅವಳಿಗೆ ತಿಳಿಸಿಹೇಳಿ. ಅಕಸ್ಮಾತ್ತಾಗಿ ತಲೆದೋರುವ ಆಸ್ಪತ್ರೆ ವೆಚ್ಚಕ್ಕೂ ಹಣ ತೆಗೆದಿಡಬೇಕಾದ ಅನಿವಾರ್ಯತೆಯ ಬಗ್ಗೆಯೂ ಅವಳಿಗೆ ಹೇಳಿ. ಮನೆಖರ್ಚಿಗೆ ಅಂತ ಅವಳಿಗೆ ಒಂದಿಷ್ಟು ಕೊಟ್ಟು ಅದರಲ್ಲೇ ಅವಳು ಮಿತವ್ಯಯ ಮಾಡಿ ಉಳಿಸಿಕೊಂಡರೆ ಅದು ಅವಳಿಗೇ ಅಂತಲೂ ತಿಳಿಸಿ. ಪ್ರತೀವಾರ ಸಿನಿಮಾಕ್ಕೆ ಹೋಗುವುದರ ಬದಲು ತಿಂಗಳಿಗೊಂದೇ ಅಂತ ಮಿತಿಗೊಳಿಸಿ. ಹೊಟೇಲಿಗೆ ಹೋಗುವುದನ್ನೂ ಕಡಿಮೆ ಮಾಡಿ. ಈಗ ಸಾಲ ಮಾಡಿ ಮಜಾ ಉಡಾಯಿಸಿ ಹೆಂಡತಿಯ ಎದುರು ಹೀರೋ ಅನಿಸಿಕೊಳ್ಳಲು ಹೋಗಿ ಮುಂದೆ ಸಮಸ್ಯೆಗೆ ಸಿಕ್ಕಿಹಾಕಿಕೊಂಡರೆ ಯಾರೂ ಬಚಾಯಿಸಲು ಬರುವುದಿಲ್ಲ. ನೀವು ಅವಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಾಸ್ತವವನ್ನು ಸರಿಯಾಗಿ ವಿವರಿಸಿ ಹೇಳಿದರೆ ಅವಳಿಗೂ ಅರ್ಥವಾಗಬಹುದು. ಡ್ರೈವರ್ ಸೀಟಿನಲ್ಲಿ ಕುಳಿತಿರುವ ನಿಮಗೆ ಸಂಸಾರವನ್ನು ಸರಿಯಾಗಿ ಚಲಾಯಿಸಿಕೊಂಡು ಹೋಗುವ ಜವಾಬ್ದಾರಿಯೂ ಇದೆ.

LEAVE A REPLY