ಗಂಡನಿಗೆ ಅತ್ತಿಗೆಯ ಜೊತೆ ಯಾಕಷ್ಟು ಸಲುಗೆ?

ಪ್ರ : ನನಗೀಗ 29 ವರ್ಷ. ಗಂಡನಿಗೆ 32. ಮದುವೆಯಾಗಿ ಒಂದು ವರ್ಷವಾಯಿತು. ನಮ್ಮದು ಅವಿಭಕ್ತ ಕುಟುಂಬ. ನಮ್ಮವರ ಅಣ್ಣನೇ ಮನೆಯ ಯಜಮಾನ. ಅವರ ಅತ್ತಿಗೆಯ ಮಾತೇ ಇಲ್ಲಿ ಎಲ್ಲರಿಗೂ ವೇದವಾಕ್ಯ. ಅವರಿಗೆ ಎರಡು ಮಕ್ಕಳು. ನನಗೆ ಮಾವ ಇಲ್ಲ. ಅತ್ತೆಗಂತೂ ತನ್ನ ಹಿರಿಯ ಸೊಸೆ ಏನು ಹೇಳಿದರೂ ಸರಿ. ಆಕೆ ನಮ್ಮ ಅತ್ತೆಯ ಅಣ್ಣನ ಮಗಳೇ ಆದ್ದರಿಂದ ಮತ್ತಷ್ಟು ಮೋಹ ಅವರಿಗೆ. ನಮ್ಮವರಂತೂ ಪ್ರತಿಯೊಂದಕ್ಕೂ ಅತ್ತಿಗೆಯನ್ನೇ ಅವಲಂಬಿಸುವುದು. ನನಗಿಂತ ಅವಳೇ ಹೆಚ್ಚು ಅವರಿಗೆ. ತಲೆಗೆ ಎಣ್ಣೆ ಹಾಕಿಸಿಕೊಳ್ಳುವುದೂ ಕೆಲವೊಮ್ಮೆ ಅವಳ ಹತ್ತಿರವೇ. ಅತ್ತಿಗೆ ನನ್ನ ಗಂಡನಿಗಿಂತ ಕೆಲವು ತಿಂಗಳಿಗೆ ದೊಡ್ಡವಳು. ಅವರಿಬ್ಬರ ನಡುವಿನ ಸಲುಗೆ ನೊಡಿದವರಿಗೇ ಮುಜುಗರ ಹುಟ್ಟಿಸುವಂತದ್ದು. ಒಬ್ಬರು ಇನ್ನೊಬ್ಬರನ್ನು ಕಿಚಾಯಿಸಿಕೊಳ್ಳುತ್ತಾ ಹೊಡೆದುಕೊಂಡೇ        ಮಾತಾಡುತ್ತಾರೆ. ಭಾವನ ಎದುರಿಗೇ ಅವರು ಹಾಗೆ ನಡೆದುಕೊಂಡರೂ ಭಾವ ಏನೂ ಹೇಳುವುದಿಲ್ಲ. ನಾನು ನನ್ನ ಗಂಡನ ಜೊತೆ ಒಬ್ಬಳೇ ಎಲ್ಲೂ ಹೊಗುವಂತಿಲ್ಲ. ಸಿನಿಮಾಕ್ಕೆ ಹೋಗುವುದಿದ್ದರೂ ಇವರ ಅತ್ತಿಗೆ ನಮ್ಮ ಜೊತೆ ಬರುತ್ತಾಳೆ. ಭಾವನಿಗೆ ಅದರಲ್ಲೆಲ್ಲ ಆಸಕ್ತಿ ಕಡಿಮೆ ಇರುವುದರಿಂದ ನಮ್ಮವರು ಎಲ್ಲೇ ಹೋಗುವುದಿದ್ದರೂ ಅವಳನ್ನು ಕರೆಯುತ್ತಾರೆ. ನನಗೆ ಒಳಗೊಳಗೇ ಅಸಮಧಾನವಿದ್ದರೂ ಹೊರಗೆ ನಗುವಿನ ಮುಖವಾಡ ಹಾಕುತ್ತಿದ್ದೇನೆ. ಎಲ್ಲರ ಜೊತೆ ಹೊಂದಿಕೊಂಡು ಹೋಗಬೇಕು ಅಂತ ಮದುವೆಗೆ ಮೊದಲೇ ಅವರು ಶರತ್ತು ಹಾಕಿದ್ದರಿಂದ ನನಗೆ ಈಗ ಅವರ ನಡೆವಳಿಕೆಯ ಬಗ್ಗೆ ದೂರಲೂ ಕಷ್ಟ. ನಮ್ಮವರಿಗೆ ಅತ್ತಿಗೆಯ ಜೊತೆ ಬೇರೆ ರೀತಿಯ ಸಂಬಂಧ ಹೊಂದಿರಬಹುದೇ ಅನ್ನುವ ಸಂಶಯವೂ ಕೆಲವೊಮ್ಮೆ ಕಾಡುತ್ತಿದೆ. ಅತ್ತಿಗೆ-ಮೈದುನರನ್ನು ಹೇಗೆ ದೂರ ಮಾಡಲಿ?

: ಸಮಸ್ಯೆಯೇ ಇಲ್ಲದ ಕಡೆ ಸಮಸ್ಯೆ ಸೃಷ್ಟಿಸುತ್ತಿದ್ದೀರಿ ಅಂತಲೇ ಅನಿಸುತ್ತದೆ. ನಿಮ್ಮ ಈ ತಲೆಬಿಸಿಗೆ ನಿಮ್ಮ ಸಂಕುಚಿತ ಮನೋಭಾವವೇ ಕಾರಣ ವಿನಃ ಬೇರೇನಿಲ್ಲ. ನಿಮ್ಮ ಓರಗಿತ್ತಿ ಮನೆಯವರೆಲ್ಲರ ಜೊತೆ ಹೊಂದಾಣಿಕೆಯಿಂದಿದ್ದು ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಮನೋಭಾವದವಳಾದರೆ ನೀವು ಸಂಸಾರದ ಮಧ್ಯೆ ಒಡಕು ಸೃಷ್ಟಿಸಲು ಬಯಸುತ್ತಿದ್ದೀರಿ ಅಷ್ಟೇ. ನಿಮ್ಮವರ ಅತ್ತಿಗೆ ಮಾವನ ಮಗಳೇ ಆದ್ದರಿಂದ ಚಿಕ್ಕಂದಿನಿಂದಲೂ ಅವರೆಲ್ಲ ಜೊತೆಯಲ್ಲಿ ಆಡಿಬೆಳೆದವರು. ಆ ಸಲುಗೆ ಅವರಿಗೆ ಮೊದಲಿನಿಂದಲೂ ಇತ್ತು. ನಿಮ್ಮ ಭಾವನಿಗೂ ಅವರಿಬ್ಬರ ಮೇಲೆ ಪೂರ್ತಿ ನಂಬಿಗೆಯಿರುವುದರಿಂದಲೇ ಅವರ ಸಲುಗೆಯನ್ನು ಭಾವ ಅಪಾರ್ಥಮಾಡಿಕೊಳ್ಳಲಿಲ್ಲ. ನಿಮ್ಮನ್ನು ಮದುವೆಯಾಗುವುದಕ್ಕಿಂತ ಮೊದಲು ಪ್ರತಿಯೊಂದಕ್ಕೂ ನಿಮ್ಮ ಗಂಡ ಅತ್ತಿಗೆಯನ್ನೇ ಅವಲಂಬಿಸಿದ್ದು ಈಗ ಎಲ್ಲದಕ್ಕೂ ನಿಮ್ಮ ಹತ್ತಿರ ಬರಲು ಕೆಲಸಮಯ ಬೇಕಾಗಬಹುದು. ನೀವೂ ಬೇಧಭಾವವೆಣಿಸದೇ ಈಗ ಎಲ್ಲರ ಜೊತೆ ಬೆರೆತು ಅವರನ್ನೆಲ್ಲ ಆಕರ್ಷಿಸಬೇಕೇ ವಿನಃ ನಿಮ್ಮ ಓರಗಿತ್ತಿ ಮೇಲೆ ಅಸಮಾಧಾನ ಪಟ್ಟುಕೊಂಡರೆ ಪ್ರಯೋಜನವಿಲ್ಲ. ಆಕೆಗೆ ನಿಮ್ಮ ಗಂಡನ ಮೇಲೆ ಸಹೋದರ ಪ್ರೀತಿ ಇದೆಯೇ ಹೊರತು ಬೇರೇನಿಲ್ಲ. ಪ್ರತ್ಯೇಕತಾವಾದಿಯಾಗದೇ       ಎಲ್ಲರೂ ಸೇರಿಕೊಂಡು ಖುಶಿಪಡುವ ವಿಶಾಲಮನೋಭಾವ ಬೆಳೆಸಿಕೊಳ್ಳುವುದೊಂದೇ ನಿಮ್ಮ ಸಮಸ್ಯೆಗೆ ಪರಿಹಾರ.