ಭವಿಷ್ಯದ ಸ್ಮಾರ್ಟ್ ಸಿಟಿಯಲ್ಲಿದೆ ದಿಗಿಲು ಹುಟ್ಟಿಸುವ ತೆರೆದ ಚರಂಡಿಗಳು

ಸಾಂದರ್ಭಿಕ ಚಿತ್ರ

ಚಿಂತನೆ

* ಐ ಜೆ ಎಸ್ ಶೇಟ್

ನಮ್ಮ ಮಂಗಳೂರು ಇನ್ನು ಕೆಲವೇ ವರ್ಷಗಳಲ್ಲಿ ಸ್ಮಾರ್ಟ್ ಸಿಟಿಯಾಗಲಿದೆ. ಆದರೆ ಈ ನಗರದಲ್ಲಿರುವ ಹಲವಾರು ಸಮಸ್ಯೆಗಳಂತೂ ಸ್ಮಾರ್ಟ್ ಸಿಟಿಗೆ ತಕ್ಕಂತಹುದ್ದಲ್ಲ. ಇತ್ತೀಚಿಗಿನ ದಿನಗಳಲ್ಲಿ ನಗರದಲ್ಲಿ ಮಲೇರಿಯ, ಡೆಂಗ್ಯು, ಚಿಕನ್ ಗುನ್ಯ ಹಾವಳಿ ಹೆಚ್ಚಾಗಿದ್ದು ಅನೇಕರು ಆಸ್ಪತ್ರೆ ಸೇರುತ್ತಿದ್ದಾರೆ. ಸೊಳ್ಳೆ ಕಾಟ ಹಾಗೂ ನೈರ್ಮಲ್ಯದ ಕೊರತೆಯೇ ಇದಕ್ಕೆ ಕಾರಣ.

ಅಷ್ಟಕ್ಕೂ ಇಷ್ಟೊಂದು ಸೊಳ್ಳೆಗಳ ಮೂಲ ಯಾವುದೆಂದು ತಿಳಿಯ ಹೊರಟರೆ ಇಲ್ಲಿರುವ ಕೆಸರಿನ ಕೂಪವಾಗಿರುವ ಹಲವಾರು ತೆರೆದ ಚರಂಡಿಗಳೇ ಕಾರಣವೆಂದು ತಿಳಿಯುತ್ತದೆ. ಹಿಂದೆಲ್ಲಾ ಈ ಚರಂಡಿಗಳು ಮಳೆ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿ ಕೊಡುತ್ತಿದ್ದವು. ಆದರೆ ನಗರ ಬೆಳೆದಂತೆ, ಅದರ ಜನಸಂಖ್ಯೆ ಹೆಚ್ಚಾದಂತೆ ಹಾಗೂ ಬಹುಮಹಡಿ ಕಟ್ಟಡಗಳ ಸಂಖ್ಯೆ ಜಾಸ್ತಿಯಾದಂತೆ  ಅದಕ್ಕೆ ತಕ್ಕಂತೆ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ತ್ಯಾಜ್ಯ ನೀರು ಈ ಮಳೆ ನೀರ ಚರಂಡಿಗಳಲ್ಲಿಯೇ  ಹರಿಯುತ್ತಿರುತ್ತವೆ. ಇದರ ಒಟ್ಟಾರೆ ಪರಿಣಾಮ – ಹಲವೆಡೆ ಚರಂಡಿಗಳು ಕಸಕಡ್ಡಿ, ತ್ಯಾಜ್ಯಗಳಿಂದ ತುಂಬಿ, ನೀರು ಸರಾಗವಾಗಿ ಹರಿಯಲು ದಾರಿಯಿಲ್ಲದೆ ಅಲ್ಲಿಯೇ ಶೇಖರಣೆಗೊಂಡು ಸೊಳ್ಳೆಗಳ ಉತ್ಪತ್ತಿಗೆ ವರದಾನವಾಗಿ ಬಿಟ್ಟಿದೆ.

ಇಂತಹ ಹಲವಾರು ಅನಧಿಕೃತ ಚರಂಡಿಗಳು  ಬೋಳಾರದಿಂದ ಬೈಕಂಪಾಡಿವರೆಗೆ ಇವೆ. ಸೊಳ್ಳೆ ನಿವಾರಕಗಳನ್ನು ಸಿಂಪಡಿಸಲೂ ಸ್ಥಳೀಯಾಡಳಿತ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಇದು ಆಧುನಿಕ ಕಾಲದ ಆಡಳಿತಗಾರರು ಜನರನ್ನು ಹಿಂಸಿಸುವ ವಿಧಾನ. ಜನರು ಕೂಡ ಪ್ರತಿಭಟಿಸದೆ ಸಮಸ್ಯೆ ಪರಿಹರಿಸಲು ಯಾವುದೇ ಕ್ರಮಕ್ಕೆ ಆಗ್ರಹಿಸುತ್ತಿಲ್ಲ.

ನಗರದ ಮಣ್ಣಗುಡ್ಡದ ಗುಂಡೂ ರಾವ್ ಲೇನ್ ನಿವಾಸಿಯಾಗಿರುವ ಹಿರಿಯ ನಾಗರಿಕರೊಬ್ಬರು ಇತ್ತೀಚೆಗೆ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ  ಈ ಸಮಸ್ಯೆಯ ಬಗ್ಗೆ ಗಂಭೀರವಾಗಿ ಯೋಚಿಸತೊಡಗಿದ್ದಾರೆ. ಜನರು ತೆರಿಗೆ ಪಾವತಿಸುತ್ತಿದ್ದರೂ ನಗರದ ಹಲವಾರು ಕಡೆ ನೈರ್ಮಲ್ಯ ಕಾಪಾಡಲು ಕ್ರಮವೇ ಕೈಗೊಳ್ಳಲಾಗುತ್ತಿಲ್ಲವೆಂಬುದು ಇವರ ದೂರು.  ಈ ಸೊಳ್ಳೆಗಳ ಕಾಟದಿಂದ ಹಾಗೂ  ತ್ಯಾಜ್ಯ ನೀರಿನಿಂದ ಕೆಸರಿನ ಕೂಪವಾಗಿರುವ ಹಲವು ಚರಂಡಿಗಳಿಂದಾಗಿ ಜನರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.

ನೀರಿನ ಮೂಲಗಳು ಒಳಚರಂಡಿಗಳಿಂದಾಗಿ ಹೇಗೆ ಕಲುಷಿತವಾಗುತ್ತವೆ ಎನ್ನುವುದಕ್ಕೆ ಜೆಪ್ಪುವಿನಲ್ಲಿರುವ ಗುಜ್ಜರಕೆರೆ ಒಂದು ಜ್ವಲಂತ ಸಾಕ್ಷಿಯಾಗಿದೆ. ಇತ್ತೀಚೆಗೆ ಮಣ್ಣಗುಡ್ಡೆಯ ನಿವಾಸಿಗಳು ಹುಳಗಳ ಕಾಟದಿಂದ ಬೇಸತ್ತು  ಪ್ರತಿಭಟಿಸಿದ್ದರು. ಸಮೀಪದ ಆಹಾರ ನಿಗಮ ಗೋದಾಮಿನಲ್ಲಿ ಶೇಖರಿಸಲ್ಪಟ್ಟಿದ್ದ ಅಕ್ಕಿಯಲ್ಲಿದ್ದ ಈ ಹುಳಗಳು ಸುತ್ತಲಿನ ಪ್ರದೇಶಗಳಿಗೆ ಹರಡಿ ಸಮಸ್ಯೆ ತಲೆದೋರಿತ್ತು, ಈ ಸಂಬಂಧ ಪರಿಹಾರ ಕ್ರಮಗಳು ಇನ್ನೂ ಪೂರ್ತಿಯಾಗಿಲ್ಲ.

ಶಿಕ್ಷಣ ತಜ್ಞ ಪಿ ಜಿ ಪ್ರಭು ಕೂಡ ನಗರದಲ್ಲಿರುವ ನೈರ್ಮಲ್ಯ ಸಮಸ್ಯೆಯ ಬಗ್ಗೆ ಬೇಸತ್ತಿದ್ದಾರೆ.  ಸ್ಥಳೀಯಾಡಳಿತ ಸಮಸ್ಯೆಗೆ ಅನಾಸ್ಥೆ ತೋರಿಸುತ್ತಿರುವುದರಿಂದ ತಾನು ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆಯುವುದಾಗಿ ಹೇಳುತ್ತಾರೆ. ಇಂತಹ ಸಮಸ್ಯೆಗೆ ಆಡಳಿತದಲ್ಲಿರುವ ಭ್ರಷ್ಟಾಚಾರವೇ ಮೂಲ ಕಾರಣವಾಗಿದ್ದು ಹಲವಾರು ಬಾರಿ ಸರಕಾರ ಬಿಡುಗಡೆಗೊಳಿಸಿದ ಹಣ ಸಂಬಂಧಿತ ಕಾರ್ಯಗಳಿಗೆ ವಿನಿಯೋಗವಾಗದೇ ಇರುವ ಸಾಧ್ಯತೆಯೂ ಇದೆ ಎಂದು ಅವರು ಹೇಳುತ್ತಾರೆ.