ಯುದ್ಧವನ್ನೇ ಮಾಡದೇ ಭಾರತೀಯ ಸೈನಿಕರನ್ನು ಪಾಕ್ ಉಗ್ರರು ಅಷ್ಟು ಸಲೀಸಾಗಿ ಹತ್ಯೆಗೈಯ್ಯುವುದು ಹೇಗೆ ?

ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳ ವಲಯದಲ್ಲಿ ಅಸಡ್ಡೆ ಮತ್ತು ನಿರ್ಲಕ್ಷ್ಯ ಹೆಚ್ಚಾಗುತ್ತಿರುವುದರಿಂದಲೇ ಈ ರೀತಿಯ ದಾಳಿ ಪದೇ ಪದೇ ಸಂಭವಿಸುತ್ತಿದೆ.

  •  ಶ್ರೀಕತ್ ದತ್ತಾ

ಪಾಕಿಸ್ತಾನದಿಂದ ನುಸುಳಿಬಂದ ಭಯೋತ್ಪಾದಕರು ಮತ್ತೊಮ್ಮೆ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ್ದು ಈ ಬಾರಿ ನಗ್ರೋಟಾ ಕಂಟೋನಮೆಂಟ್ ಪ್ರದೇಶದಲ್ಲಿರುವ ಕ್ಯಾಂಪ್ ದಾಳಿಗೆ ತುತ್ತಾಗಿದ್ದು ಇಬ್ಬರು ಸೇನಾಧಿಕಾರಿಗಳು ಮತ್ತು ಐವರು ಸೈನಿಕರು ಮೃತಪಟ್ಟಿದ್ದಾರೆ. ಉರಿ ದಾಳಿಯ ಎರಡು ತಿಂಗಳ ನಂತರ ಈ ದಾಳಿ ಸಂಭವಿಸಿದೆ.

ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳ ವಲಯದಲ್ಲಿ ಅಸಡ್ಡೆ ಮತ್ತು ನಿರ್ಲಕ್ಷ್ಯ ಹೆಚ್ಚಾಗುತ್ತಿರುವುದರಿಂದಲೇ ಈ ರೀತಿಯ ದಾಳಿ ಪದೇ ಪದೇ ಸಂಭವಿಸುತ್ತಿದೆ. ಲಷ್ಕರ್ ಇ ತೊಯಿಬಾ ಸಂಘಟನೆಗೆ ಸೇರಿದ ಭಯೋತ್ಪಾದಕರು ದಾಳಿ ನಡೆದ ಕೆಲವು ಗಂಟೆಗಳ ಮುನ್ನವೇ ಗಡಿಯೊಳಗೆ ನುಸುಳಿದ್ದು ಜಮ್ಮು ಕಾಶ್ಮೀರದ ಪೊಲೀಸರ ಸಮವಸ್ತ್ರ ತೊಟ್ಟಿದ್ದರು ಎನ್ನಲಾಗಿದೆ. ಹಾಗಾಗಿ ಸೇನಾ ಅಧಿಕಾರಿಗಳ ಮೆಸ್ ಹೊರಗಿದ್ದ ಭದ್ರತಾ ಪಡೆಗಳಿಗೆ ಸುಳಿವು ಸಿಗದೆ ಹೋಗಿದೆ. ಮುಂಜಾನೆ ಐದು ಗಂಟೆಗೆ ಮೆಸ್ಸಿನೊಳಗೆ ನುಗ್ಗಿರುವ ಉಗ್ರರು ಗ್ರೆನೇಡ್ ದಾಳಿ ನಡೆಸಿ ನಂತರ ಸೈನಿಕರು ವಾಸಿಸುವ ವಾಸಗೃಹಗಳಿಗೆ ತೆರಳಿದ್ದಾರೆ. ಕೂಡಲೇ ಕಾರ್ಯಾಚರಣೆಯಲ್ಲಿ ತೊಡಗಿದ ಭಾರತೀಯ ಯೋಧರು ಅನೇಕ ಮಕ್ಕಳು ಮತ್ತು ಮಹಿಳೆಯರನ್ನು ಸಾವಿನ ದವಡೆಯಿಂದ ತಪ್ಪಿಸಿದ್ದಾರೆ.

ಇತ್ತೀಚಿನ ನಗ್ರೋಟಾ ದಾಳಿಯೂ ಸೇರಿದಂತೆ ಕಳೆದ ಒಂದು ತಿಂಗಳಲ್ಲಿ ಭಾರತದ 11 ಯೋಧರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಮೂರು ತಿಂಗಳಲ್ಲಿ 40 ಯೋಧರು ಬಲಿಯಾಗಿದ್ದಾರೆ. ಉಗ್ರರ ದಾಳಿ ಜಮ್ಮು ಕಾಶ್ಮೀರವನ್ನು ದಾಟಿ ಹೋಗಿದ್ದು ಪಠಾಣಕೋಟದವರೆಗೂ ವ್ಯಾಪಿಸಿದೆ. ಶ್ರೀನಗರದ ಬಳಿ ಪಂಪೋರ್ ದಾಳಿಯನ್ನು ಹೊರತುಪಡಿಸಿದರೆ ಬಹುಪಾಲು ದಾಳಿಗಳು ಸೇನಾ ನೆಲೆಗಳ ಮೇಲೆಯೇ ನಡೆದಿರುವುದು ವಿಶೇಷ.

ಒಂದು ವಾರದ ಹಿಂದೆ ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಎ ಕೆ ಶರ್ಮ ನಗ್ರೋಟಾದಲ್ಲಿ ನೆಲೆ ಮಾಡಿರುವ ಯೋಧರ ಗುಂಪಿಗೆ ದಂಡನಾಯಕರಾಗಿ ನೇಮಕಗೊಂಡಿದ್ದರು. ಅಧಿಕಾರವಹಿಸಿಕೊಂಡ ಕೂಡಲೇ ಶರ್ಮ ಅವರಿಗೆ ಸೇನಾ ನೆಲೆಯ ಮೇಲೆ ಉಗ್ರರ ದಾಳಿ ನಡೆಯುವ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಇದಕ್ಕೂ ಮುನ್ನ ಕಾಶ್ಮೀರದ ಉಗ್ರರನ್ನು ಸಮರ್ಥವಾಗಿ ಎದುರಿಸಿರುವ ಶರ್ಮ ತಮ್ಮ ಕ್ಯಾಂಪಿನಲ್ಲಿರುವ ಯೋಧರಿಗೆ ಎಚ್ಚರಿಕೆಯಿಂದಿರಲು ಕೋರಿದ್ದರೂ ಈ ಸಂಭಾವ್ಯ ಘಟನೆಯನ್ನು ತಪ್ಪಿಸುವ  ನಿಟ್ಟಿನಲ್ಲಿ ಸಕ್ರಿಯವಾದ ಕ್ರಮ ಕೈಗೊಂಡಿಲ್ಲ. ಪರಿಣಾಮ ಇಂದು ಸ್ಪಷ್ಟವಾಗಿದೆ.

ಇತ್ತೀಚಿನ ನಗ್ರೋಟಾ ದಾಳಿಯೂ ಸೇರಿದಂತೆ ಕಳೆದ ಒಂದು ತಿಂಗಳಲ್ಲಿ ಭಾರತದ 11 ಯೋಧರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಮೂರು ತಿಂಗಳಲ್ಲಿ 40 ಯೋಧರು ಬಲಿಯಾಗಿದ್ದಾರೆ. ಉಗ್ರರ ದಾಳಿ ಜಮ್ಮು ಕಾಶ್ಮೀರವನ್ನು ದಾಟಿ ಹೋಗಿದ್ದು ಪಠಾಣಕೋಟದವರೆಗೂ ವ್ಯಾಪಿಸಿದೆ. ಶ್ರೀನಗರದ ಬಳಿ ಪಂಪೋರ್ ದಾಳಿಯನ್ನು ಹೊರತುಪಡಿಸಿದರೆ ಬಹುಪಾಲು ದಾಳಿಗಳು ಸೇನಾ ನೆಲೆಗಳ ಮೇಲೆಯೇ ನಡೆದಿರುವುದು ವಿಶೇಷ.

ಸೇನಾ ವಲಯದಲ್ಲಿರುವ ಶ್ರೇಣೀಕರಣ ಮತ್ತು ಮೇಲ್ ಶ್ರೇಣಿಯ ನಿರ್ಲಕ್ಷ್ಯವೇ ಇಂತಹ ದಾಳಿಗಳಿಗೆ ಕಾರಣ ಎನ್ನುವುದು ಸ್ಪಷ್ಟವಾಗುತ್ತಿದೆ. 20 ಯೋಧರು ಬಲಿಯಾದ ಉರಿ ದಾಳಿಯ ತನಿಖೆಯಲ್ಲೂ ಸಹ ಸೇನಾಧಿಕಾರಿಗಳ ನಿರ್ಲಕ್ಷ್ಯ ಸ್ಪಷ್ಟವಾಗಿ ಗೋಚರಿಸಿದೆ. ಭದ್ರತಾ ವಲಯದಲ್ಲಿರುವ ಅಧಿಕಾರಿಗಳು ಈ ತನಿಖೆ ನಡೆಸಿದ್ದು ಹಲವಾರು ಆತಂಕಕಾರಿ ಮಾಹಿತಿಯನ್ನು ಒದಗಿಸಿದ್ದಾರೆ.

ಈ ದಾಳಿಯ ಸಂದರ್ಭದಲ್ಲಿ ಸೇನಾ ನೆಲೆಯಲ್ಲಿ ಕನಿಷ್ಠ ಮಟ್ಟದ ಭದ್ರತೆಯೂ ಇಲ್ಲದಿದ್ದುದನ್ನು ಗುರುತಿಸಲಾಗಿದೆ. ಸೇನಾ ಕ್ಯಾಂಪ್ ಸುತ್ತಲೂ ನಿರ್ಮಿಸಿರುವ ಬೇಲಿಯೂ ಸಹ ಶಿಥಿಲವಾಗಿದ್ದು ಉಗ್ರರು ಗಾಲ್ಫ್ ಮೈದಾನದ ಮೂಲಕ ನುಸುಳಿ ಬಂದಿದ್ದಾರೆ ಎನ್ನಲಾಗಿದೆ. ಗುಪ್ತಚರ ಇಲಾಖೆಯ ಮುನ್ನೆಚ್ಚರಿಕೆಯ ಹೊರತಾಗಿಯೂ ಈ ದಾಳಿ ಸಂಭವಿಸಿರುವುದು ಸೇನಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಈ ಸಂಭಾವ್ಯ ದಾಳಿಯ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದ್ದರೂ ಕೆಲವು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಉರಿ ದಾಳಿಯ ನಂತರ  12 ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದ್ದು ಸೇನಾಧಿಕಾರಿಗಳು ಯಾವುದೇ ಯಶಸ್ಸು ಕಾಣದೆ ಹಿಂದಿರುಗಿದ್ದಾರೆ. ಉಗ್ರರು ಸುಲಭವಾಗಿ ತಪ್ಪಿಸಿಕೊಂಡಿದ್ದಾರೆ.

ವಾಜಪೇಯಿ ಸರ್ಕಾರ ಷರತ್ತುಬದ್ಧವಾಗಿ ಬಿಡುಗಡೆ ಮಾಡಿದ್ದ ಮೌಲಾನ ಮಸೂದ್ ಅಜರ್ ನೇತೃತ್ವದ ಜೈಷ್ ಇ ಮೊಹಮ್ಮದ್ ಸಂಘಟನೆ ಉರಿ ದಾಳಿಯ ರೂವಾರಿ ಎಂದು ಹೇಳಲಾಗಿತ್ತು. ಆದರೆ ನಂತರ ತನಿಖೆಗಳಿಂದ ಈ  ದಾಳಿಯನ್ನು ಲಷ್ಕರ್ ಸಂಘಟನೆ ನಡೆಸಿರುವುದಾಗಿ ತಿಳಿದುಬಂದಿದೆ.

ಕಳೆದ ವರ್ಷ ನಗ್ರೋಟಾದ ಸೇನಾ ನೆಲೆಯ ಮೇಲೆ ದಾಳಿಯ ಸಂಚು ರೂಪಿಸಿದ್ದ ಗುಂಪನ್ನು ಗುಪ್ತಚರ ಇಲಾಖೆ ಗುರುತಿಸಿ ನಿಷ್ಫಲಗೊಳಿಸಿತ್ತು.  ಆಗಿನಿಂದಲೂ ನಗ್ರೋಟಾ ಕ್ಯಾಂಪ್ ಉಗ್ರರ ದಾಳಿಗೆ ತುತ್ತಾಗುವ ಸೂಚನೆಗಳನ್ನು ಸ್ಪಷ್ಟವಾಗಿ ನೀಡಲಾಗಿತ್ತು. 2014ರ ಚುನಾವಣೆಗಳ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಭಾರತದ ಗಡಿ ಪ್ರದೇಶಗಳು ಸುರಕ್ಷಿತವಾಗಿರುತ್ತವೆ ಎಂದು ಘೋಷಿಸಿದ್ದರು. ಆದರೆ ಈ ಘೋಷಣೆ ಕೇವಲ ರಾಜಕೀಯ ಭಾಷಣವಾಗಿ ಕಂಡುಬರುತ್ತಿದೆ.

ಭಾರತೀಯ ಸೇನೆಯ ಸರ್ಜಿಕಲ್ ದಾಳಿಯ ನಂತರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಈ ದಾಳಿಗೆ ಆರೆಸ್ಸೆಸ್ ಸ್ಪೂರ್ತಿ ನೀಡಿದೆ ಎಂದು ಹೇಳಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವುದಾಗಿ ಹೇಳಿದ್ದರು. ಆದರೆ ಸೇನಾ ನೆಲೆಗಳ ಮೇಲಿನ ದಾಳಿ ಅವ್ಯಾಹತವಾಗಿ ನಡೆಯುತ್ತಲೇ ಇದೆ. ರಾಜಕೀಯ ಉನ್ನತ ವಲಯಗಳಲ್ಲಿರುವ ಗೊಂದಲ ಮತ್ತು ಸೇನಾಧಿಕಾರಿಗಳ ನಿರ್ಲಕ್ಷ್ಯವೇ ಈ ದಾಳಿಗಳಿಗೆ ಕಾರಣ ಎಂದು ಸ್ಪಷ್ಟವಾಗಿದ್ದು ಗುಪ್ತಚರ ಇಲಾಖೆಯ ಮುನ್ನೆಚ್ಚರಿಕೆಯನ್ನು ಸರ್ಕಾರ ಮತ್ತು ಸೇನೆ ಗಂಭೀರವಾಗಿ ಪರಿಗಣಿಸಬೇಕಿದೆ.