ಮಗಳಿಗೆ ಯಾವ ರೀತಿ ಸಹಕರಿಸಲಿ?

ನಿಮ್ಮ ಮಗಳು ಮತ್ತು ಅವಳ ಗಂಡ ಹೇಗಾದರೂ ನಿಮ್ಮ ಮತ್ತು ಅವರ ಮನೆಯವರನ್ನು ಒಪ್ಪಿಸಿಯೇ ಮದುವೆಯಾಗಿದ್ದರೆ ಇಷ್ಟು ಕಷ್ಟ  ಎದುರಿಸಬೇಕಿರಲಿಲ್ಲ.

ಪ್ರ : ನಾವು ಮೇಲ್ವರ್ಗಕ್ಕೆ ಸೇರಿದವರು. ನಮ್ಮ ಮಗ ಮದುವೆಯಾಗಿ ಈಗ ವಿದೇಶದಲ್ಲಿ ದೊಡ್ಡ ಕೆಲಸದಲ್ಲಿ ಇದ್ದಾನೆ. ನನಗೀಗ ಇರುವುದು ಮಗಳದೇ ಚಿಂತೆ. ಅವಳು ಪಿಯುಸಿ ನಂತರ ಫ್ಯಾಷನ್ ಡಿಸೈನಿಂಗ್ ಮಾಡಿದಳು. ಅವಳು ಓದುತ್ತಿರುವಾಗಲೇ ಅವಳ ಸೀನಿಯರ್ ಒಬ್ಬರನ್ನು ಪ್ರೀತಿಸಿ ನಮ್ಮ ವಿರೋಧದ ನಡುವೆಯೂ ದೇವಸ್ಥಾನದಲ್ಲಿ ಮದುವೆಯಾದಳು. ಅವನು ನಮ್ಮ ಜಾತಿಯವನೂ ಅಲ್ಲವಾದ್ದರಿಂದ ನಾವು ಅವರನ್ನು ಮತ್ತೆ ಮನೆಗೇ ಸೇರಿಸಲಿಲ್ಲ. ಆ ಹುಡುಗನ ಮನೆಯಲ್ಲಿಯೂ ಅವರಿಗೆ ಜಾಗವಿರಲಿಲ್ಲ. ಚಿಕ್ಕ ಬಾಡಿಗೆ ಮನೆ ಹಿಡಿದು ವಾಸಿಸುತ್ತಿದ್ದಾರೆ. ನನಗೆ ಅವಳ ಮೇಲೆ ಬೇಸರವಿದ್ದರೂ ಹೆತ್ತಕರುಳು ಕೇಳುವುದಿಲ್ಲ. ಒಂದೆರಡು ಬಾರಿ ನಮ್ಮವರಿಗೆ ಗೊತ್ತಿಲ್ಲದಂತೆ ಅವಳನ್ನು ಭೇಟಿಯಾಗಿದ್ದೆ. ಈಗ ಅವಳಿಗೆ ಒಂದು ಮಗುವೂ ಇದೆ. ಅವಳ ಬಾಣಂತನಕ್ಕೆ ಕರೆಯೋಣ ಅಂತ ನಮ್ಮವರನ್ನು ಎಷ್ಟು ಕೇಳಿಕೊಂಡರೂ ಅವರು ಒಪ್ಪಿರಲಿಲ್ಲ. ಅವಳ ಸ್ನೇಹಿತೆಯ ಸಹಾಯದಿಂದ ಅವಳು ಹೇಗೋ ಆ ದಿನ ಕಳೆದಳು. ಮಗಳು ಆರ್ಥಿಕವಾಗಿ ಸ್ವಲ್ಪ ಕಷ್ಟದಲ್ಲಿದ್ದರೂ ಅವರಿಬ್ಬರ ಮಧ್ಯೆ ಇರುವ ಪ್ರೀತಿಯಿಂದಾಗಿ ಅವಳು ಖುಶಿಂiÀiಲ್ಲಿಯೇ ಇದ್ದಳು. ಅದೇ ನನಗೂ ಸಮಾಧಾನದ ವಿಷಯವಾಗಿತ್ತು. ಆದರೆ ಕಳೆದ ತಿಂಗಳು ಅವಳ ಗಂಡನಿಗೆ ಆಕ್ಸಿಡೆಂಟಾಗಿ ಕಾಲು ಮುರಿದುಕೊಂಡು ಮನೆಯಲ್ಲಿಯೇ ಇದ್ದಾನಂತೆ. ಮಗಳೀಗ ಮಗುವಿನ ಜೊತೆ ಆತನನ್ನೂ ನೋಡಿಕೊಳ್ಳಬೇಕು. ಅದೂ ಅಲ್ಲದೇ ಅವನ ಸಂಪಾದನೆಯೂ ನಿಂತು ಅವರೀಗ ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ ಅಂತ ಅವಳ ಸ್ನೇಹಿತೆಯ ಮೂಲಕ ತಿಳಿಯಿತು. ನನಗೆ ಊಟವೇ ಸೇರುತ್ತಿಲ್ಲ. ನಿದ್ದೆಯೂ ಬರುತ್ತಿಲ್ಲ. ಅವರನ್ನು ನಮ್ಮ ಮನೆಗೆ ಕರೆಸಲೂ ಗಂಡ ಒಪ್ಪುತ್ತಿಲ್ಲ. ತಪ್ಪು ಮಾಡಿದ್ದಾಳೆ, ಅನುಭವಿಸಲಿ ಬಿಡು ಅಂತ ಹೇಳುತ್ತಿದ್ದಾರೆ. ನನ್ನ ಮಗಳಿಗೂ ಸ್ವಾಭಿಮಾನ ಜಾಸ್ತಿ. ಅಪ್ಪ ಕರೆಯದೇ ಬರುವುದಿಲ್ಲ ಅವಳು. ನಾನು ಹೇಗೆ ಅವಳ ಜೀವನ ಸರಿಪಡಿಸಲಿ?

: ಹೆತ್ತವರ ಆಶೀರ್ವಾದವಿಲ್ಲದೇ ಪ್ರೀತಿಯ ಬೆನ್ನುಹತ್ತಿ ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾದ ಎಷ್ಟೋ ಯುವಜೋಡಿಗಳು ಇದೇ ರೀತಿ ಕಷ್ಟ ಅನುಭವಿಸುತ್ತಿದ್ದಾರೆ. ನಿಮ್ಮ ಮಗಳಿಗೆ ಕೊನೇಪಕ್ಷ ಗಂಡನ ಪ್ರೀತಿಯಾದರೂ ಇದೆ. ಕೆಲವು ದಂಪತಿಗಳ ಮಧ್ಯೆ ಪ್ರೀತಿಸಿ ಮದುವೆಯಾದ ಕೆಲವು ದಿನಗಳಲ್ಲೇ ವೈಮನಸ್ಸು ಉಂಟಾಗಿ ಮತ್ತೂ ಕಷ್ಟಕ್ಕೆ ಸಿಲುಕಿಕೊಂಡವರೂ ಇದ್ದಾರೆ. ನಿಮ್ಮ ಮಗಳು ಮತ್ತು ಅವಳ ಗಂಡ ಹೇಗಾದರೂ ನಿಮ್ಮ ಮತ್ತು ಅವರ ಮನೆಯವರನ್ನು ಒಪ್ಪಿಸಿಯೇ ಮದುವೆಯಾಗಿದ್ದರೆ ಇಷ್ಟು ಕಷ್ಟ  ಎದುರಿಸಬೇಕಿರಲಿಲ್ಲ. ನಿಮ್ಮ ಗಂಡನೂ ಅಷ್ಟೇ. ಇನ್ನಾದರೂ ತಮ್ಮ ಹಠ ಬಿಟ್ಟು ವಾಸ್ತವವನ್ನು ಒಪ್ಪಿಕೊಂಡು ಅವರನ್ನು ಮನೆಗೆ ಸೇರಿಸಬಹುದಿತ್ತು. ಎಷ್ಟು ದಿನಾಂತ ಹೀಗೆ ವೈರತ್ವ ಸಾಧಿಸುತ್ತಾರೆ? ಅದರಿಂದ ಯಾರಿಗೂ ನೆಮ್ಮದಿ ಇರುವುದಿಲ್ಲ.  ಎಲ್ಲಕ್ಕಿಂತ ಹೆಚ್ಚಾಗಿ ತಾಯಿಯ ಒಡಲು ಕಣ್ಣೀರಿಡುತ್ತದೆ. ಗಂಡನ ವಿರೋಧದ ಹೊರತಾಗಿ ಮಗಳಿಗೆ ಸಹಾಯ ಮಾಡಲೂ ಕಷ್ಟ. ಬಿಡಲೂ ಮನಸ್ಸು ಕೇಳುವುದಿಲ್ಲ. ನಿಮಗಾಗಿಯಾದರೂ ನಿಮ್ಮ ಗಂಡನಿಗೆ ಅವಳನ್ನು ಕ್ಷಮಿಸುವಂತೆ ಕೇಳಿಕೊಳ್ಳಿ. ಅದಲ್ಲದಿದ್ದರೂ ನಿಮಗೂ ಮಗಳಿಗೆ ಸಹಾಯ ಮಾಡುವ ಹಕ್ಕಿದೆ. ಆದರೂ ಗಂಡನಿಗೆ ಹೇಳಿಯೇ ಸಹಾಯ ಮಾಡುವುದು ಒಳ್ಳೆಯದು. ಈ ಕಡೆ ಮಗಳಿಗೂ ಈ ಸಮಯದಲ್ಲಿ ತಂದೆಯ ಹತ್ತಿರ ಸ್ವಾಭಿಮಾನ ತೋರಿಸುವುದು ಒಳ್ಳೆಯದಲ್ಲ ಅಂತ ಬುದ್ಧಿ ಹೇಳಿ. ಮಗುವನ್ನು ಕರೆದುಕೊಂಡು ಮನೆಬಾಗಿಲಿಗೆ ಬಂದ ಮಗಳನ್ನು ವಾಪಾಸು ಕಳಿಸುವಷ್ಟು ನಿರ್ದಯರಾಗಲಾರರು ನಿಮ್ಮವರು. ಆದರೆ ಅವರಿಬ್ಬರೂ ತಮ್ಮ ಹಠವನ್ನೇ ಮೆರೆಸಲು ಹೋದರೆ ನೀವು ಗಟ್ಟಿಮನಸ್ಸು ಮಾಡಿಕೊಳ್ಳಲೇ ಬೇಕಾಗುತ್ತದೆ. ಮಗಳು ಸ್ವಲ್ಪ ದಿನ ಕಷ್ಟ ಅನುಭವಿಸಿದರೂ ಅವಳ ಸ್ವಾಭಿಮಾನ ಅವಳಿಗೆ ಬದುಕುವ ದಾರಿ ತೊರಿಸಿಯೇ ತೋರಿಸುತ್ತದೆ.