ಗರ್ಲ್ಫ್ರೆಂಡ್ ಬಗ್ಗೆ ಮನೆಯವರಿಗೆ ಹೇಗೆ ಹೇಳಲಿ ?

ಪ್ರ : ನಾನು ಹಳ್ಳಿಯಿಂದ ಬಂದವನು. ಇಲ್ಲಿ ಕೆಲಸಕ್ಕೆ ಸೇರಿ ನಾಲ್ಕು ವರ್ಷಗಳಾದವು. ಇಲ್ಲಿಯೇ ಕೆಲಸ ಮಾಡುವ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ನಾನು ಹಿಂದೂ. ಅವಳು ಕ್ರಿಶ್ಚಿಯನ್. ಹೇಗೋ ಇದ್ದ ನನ್ನನ್ನು ತಿದ್ದಿ ಪ್ರಸಂಟೇಬಲ್ ಆಗಿ ಕಾಣುವಂತೆ ಮಾಡುವಲ್ಲಿ ಅವಳ ಶ್ರಮ ಬಹಳಷ್ಟಿದೆ. ಅವಳನ್ನೇ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳುವ ಆಸೆ ನನ್ನದು. ಅವಳಿಗಂತೂ ನಾನೆಂದರೆ ಪ್ರಾಣ. ಆದರೆ ಅವಳ ವಿಷಯ ನಾನು ಮನೆಯವರಿಗಿನ್ನೂ ಹೇಳಿಲ್ಲ. ನಮ್ಮ ಮನೆಯಲ್ಲಿ ಸಂಪ್ರದಾಯಗಳು ಜಾಸ್ತಿ. ಅವರು ಬೇರೆ ಧರ್ಮದ ಹುಡುಗಿಯನ್ನು ಸೊಸೆಯಾಗಿ ಒಪ್ಪಲಿಕ್ಕಿಲ್ಲ. ಅದೂ ಅಲ್ಲದೇ ಮನೆಯವರು ಈಗ ನನಗೆ ಹುಡುಗಿಯನ್ನು ನೋಡುತ್ತಿದ್ದಾರೆ. ನಮ್ಮ ಜಾತಿಯ ಅನೇಕ ಹುಡುಗಿಯರ ಜಾತಕವನ್ನು ತರಿಸಿ ಇಟ್ಟಿದ್ದಾರೆ. ಆದಷ್ಟು ಬೇಗ ಒಂದು ಹುಡುಗಿಯನ್ನು ಸೆಲೆಕ್ಟ್ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಅಪ್ಪ, ಅಮ್ಮನಿಗೆ ನಾನೊಬ್ಬನೇ ಗಂಡುಮಗ ಇರುವುದು. ಅವರಿಗೆ ನನಗೊಂದು ಬೇಗ ಮದುವೆ ಮಾಡಿ ವಂಶೋದ್ಧಾರಕನನ್ನು ನೋಡುವ ಬಯಕೆ. ನನಗೀಗ ಮನೆಯವರ ವಿರುದ್ಧ ನಡೆದುಕೊಳ್ಳುವುದೂ ಕಷ್ಟ. ಅವರನ್ನು ನಿರಾಸೆಯ ಕೂಪಕ್ಕೆ ತಳ್ಳುವುದೂ ಮನಸ್ಸಿಗೆ ಹಿಂಸೆಯೆನಿಸುತ್ತಿದೆ. ಆದರೆ ನನ್ನ ಪ್ರೀತಿಯನ್ನು ತ್ಯಾಗ ಮಾಡಲೂ ನೋವೆನಿಸುತ್ತಿದೆ. ಗರ್ಲ್‍ಪ್ರೆಂಡ್ ಬಗ್ಗೆ ಮನೆಯವರಿಗೆ ಹೇಗೆ ಹೇಳಲಿ?

: ಅಂತರ್ಜಾತೀಯ ಅದರಲ್ಲೂ ಅಂತರ್ಧಮೀಯ ಮದುವೆಯನ್ನು ಸಂಪ್ರದಾಯಸ್ಥ ಕುಟುಂಬಗಳು ಒಪ್ಪುವುದು ಬಹಳ ಕಷ್ಟ. ನಿಮಗೆ ನಿಮ್ಮ ಕುಟುಂಬದವರ ಮನಸ್ಥಿತಿ ಗೊತ್ತಿದ್ದರೂ ಬೇರೆ ಧರ್ಮದ ಹುಡುಗಿಯನ್ನು ಪ್ರೀತಿಸಿದಿರಿ. ಪ್ರೀತಿಸುವಾಗ ಅದೆಲ್ಲ ಲೆಕ್ಕಕ್ಕೆ ಬರುವುದಿಲ್ಲ ಅನ್ನುವುದು ನಿಜವಾದರೂ ಆ ಪ್ರೀತಿಗೆ ಮುಂದೆ ಭವಿಷ್ಯವಿರಲಿಕ್ಕಿಲ್ಲ ಎನ್ನುವ ವಿಷಯ ನಿಮಗೆ ಗೊತ್ತಿರುವುದರಿಂದ ಅದನ್ನು ಮೊಳಕೆಯೊಡೆಯುವಾಗಲೇ ಚಿವುಟಿ ಹಾಕಬೇಕಿತ್ತು. ಈಗ ನಿಮ್ಮ ಪ್ರೀತಿ ಹೆಮ್ಮರವಾಗಿ ಬೆಳೆದುನಿಂತ ನಂತರ ಅದಕ್ಕೆ ಕೊಡಲಿಯೇಟು ಹಾಕುವುದು ಬಹಳ ಕಷ್ಟವಾಗಬಹುದು. ಇಲ್ಲಿ ನಿಮ್ಮ ಜೀವನದ ಪ್ರಶ್ನೆ ಮಾತ್ರ  ಇರುವುದಲ್ಲ. ನಿಮ್ಮ ಹುಡುಗಿಯ ಭವಿಷ್ಯವೂ ಇದರಲ್ಲಿದೆ. ಯಾವ ಕಾಲಕ್ಕೂ ನೀವು ಅವಳ ಕೈಬಿಡುವವರಲ್ಲ ಅನ್ನುವ ಭರವಸೆಯಿಂದಲೇ ಅವಳು ತನ್ನ ಮನಸ್ಸು, ಹೃದಯ ನಿಮಗರ್ಪಿಸಿದ್ದಾಳೆ. ಈಗ ನೀವು ಮನೆಯವರು ಒಪ್ಪುವುದಿಲ್ಲ ಅಂತ ನೆವ ಹೇಳಿ ಅವಳಿಂದ ದೂರ ಹೋದರೆ ಅವಳಿಗೆ ಮೋಸ ಮಾಡಿ ದಂತಾಗುವುದಿಲ್ಲವೇ? ಜನ್ಮ ಕೊಟ್ಟು ಬೆಳೆಸಿದ ತಂದೆ, ತಾಯಿಯ ವಿರುದ್ಧ ಹೋಗಿ ಮದುವೆಯಾಗುವುದೂ ಅಷ್ಟು ಸುಲಭದ ಮಾತಲ್ಲ. ಮನೆಯವರು ನಿಮ್ಮ ಸಂತೋಷಕ್ಕಾಗಿ ತಾವು ಆಚರಿಸಿಕೊಂಡು ಬಂದ ಸಂಪ್ರದಾಯವನ್ನು ಮುರಿಯುವು ದಕ್ಕೂ ತಯಾರಾದರೆ ನೀವು ಲಕ್ಕಿ.  ಅದಲ್ಲವಾದರೆ ನೀವೇ ಈಗ ಗಟ್ಟಿ ಮನಸ್ಸು ಮಾಡಿ ನಿರ್ಧಾರ ಕೈಗೊಳ್ಳಬೇಕು. ಆ ಹುಡುಗಿಗೋಸ್ಕರ ಸಮಾಜವನ್ನು ಎದುರಿಸುವ ಛಾತಿ ನಿಮ್ಮಲ್ಲಿದ್ದರೆ ಆ ಹುಡುಗಿಯನ್ನು ಮದುವೆಯಾಗಿ. ಇಲ್ಲಾ ಮನೆಯವರಿಗೆ ನೋವು ಕೊಟ್ಟು ನೀವು ಖುಶಿಪಡುವುದರಲ್ಲಿ ಅರ್ಥವಿಲ್ಲ ಅಂತನಿಸಿದರೆ ಆ ಹುಡುಗಿಯಿಂದ ದೂರವಾಗುವುದು ಅನಿವಾರ್ಯ.