ಮಗಳ ಪ್ರೀತಿಯನ್ನು ಒಪ್ಪಿಕೊಳ್ಳಬೇಕೇ?

ಸೂಕ್ಷ್ಮ ಮನಸ್ಸಿನ ಮಗಳ ಭಾವನೆಗೆ ವಿರುದ್ಧವಾಗಿ

ಹೋದರೆ ಅವಳು ಜೀವನಪರ್ಯಂತ ನೊಂದುಕೊಂಡರೆ ಎನ್ನುವ ಆತಂಕ ತಾಯಿಯಾದ ನಿಮಗಿರುವುದು ಸ್ವಾಭಾವಿಕ.

ಪ್ರ : ನಮಗಿರುವವಳು ಒಬ್ಬಳೇ ಮಗಳು. ಅವಳು ಈಗ ಡಿಗ್ರಿ ಮುಗಿಸಿ ನೌಕರಿ ಮಾಡುತ್ತಿದ್ದಾಳೆ. ಅವಳು ತುಂಬಾ ಸೂಕ್ಷ್ಮ ಸ್ವಭಾವದ ಹುಡುಗಿ. ಚಿಕ್ಕಂದಿನಿಂದಲೂ ಅವಳ ಮನಸ್ಸಿಗೆ ಸ್ವಲ್ಪ ನೋವಾದರೂ ಅಪ್ಸೆಟ್ ಆಗಿಬಿಡುತ್ತಿದ್ದಳು. ವ್ಯಂಗ್ಯವಾಗಿ ಮಾತಾಡುವವರಿಂದ ಅವಳು ದೂರವೇ ಇದ್ದುಬಿಡುತ್ತಾಳೆ. ಅವಳ ಸೂಕ್ಷ್ಮತೆಯನ್ನು ನನ್ನ ಪತಿಯೂ ಅರ್ಥಮಾಡಿಕೊಂಡಿಲ್ಲ. ಆದರೆ ನನ್ನನ್ನು ಬಿಟ್ಟರೆ ಅವಳ ಮನಸ್ಸಿಗೆ ಹತ್ತಿರವಾದವನೆಂದರೆ ಅವಳ ಗೆಳೆಯ ಮಾತ್ರ. ಇವಳ ಜೊತೆಯೇ ಓದುತ್ತಿದ್ದ ಅವನು ಈಗ ಅವಳ ಸಹೋದ್ಯೋಗಿ. ಮೊದಲು ಅವರಿಬ್ಬರೂ ಒಳ್ಳೆಯ ಸ್ನೇಹಿತರು ಅಂತಲೇ ತಿಳಿದಿದ್ದೆ. ಆದರೆ ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ವಿಷಯ ಸ್ವಲ್ಪ ದಿನಗಳ ಹಿಂದೆ ಗೊತ್ತಾಯಿತು. ಆದರೆ ಅವರು ಮಾಂಸಾಹಾರಿ. ನಾವು ಅಪ್ಪಟ ಸಸ್ಯಾಹಾರಿಗಳು. ನಮ್ಮ ಮನೆಯಲ್ಲಿ ಹಬ್ಬಹರಿದಿನಗಳು ಜಾಸ್ತಿ. ಅತ್ತೆಯವರು ಪೂಜೆಪುನಸ್ಕಾರದಲ್ಲೇ ತೊಡಗಿಕೊಂಡಿರುತ್ತಾರೆ. ನಮ್ಮವರೂ ಅಮ್ಮನ ಮಗ. ಅತ್ತೆ ಮತ್ತು ನಮ್ಮವರಿಗೆ ಮಗಳು ಪ್ರೀತಿಸುತ್ತಿರುವ ವಿಷಯ ಗೊತ್ತಿಲ್ಲ. ಅವರು ಬೇರೆ ಜಾತಿಯ ಹುಡುಗನಿಗೆ ಮದುವೆ ಮಾಡಿಕೊಡಲು ಖಂಡಿತಾ ಒಪ್ಪುವುದಿಲ್ಲ. ನನಗೂ ಅವಳು ನಮ್ಮದೇ ಜನರನ್ನು ಮದುವೆಯಾಗಲಿ ಅನ್ನುವ ಆಸೆ ಇದ್ದರೂ ಅವಳ ಗುಣ-ಸ್ವಭಾವ ಅರಿತ ನನಗೆ ಏನು ಮಾಡಬೇಕೆಂದೇ ತೋಚುತ್ತಿಲ್ಲ. ಈಗ ಮನೆಯಲ್ಲಿ ಅವಳಿಗೆ ವರನನ್ನು ನೋಡುತ್ತಿದ್ದಾರೆ. ಅವಳು ತನ್ನ ಪ್ರೀತಿಯನ್ನು ಮನೆಯವರು ಒಪ್ಪಿಕೊಳ್ಳುವುದಿಲ್ಲ ಅಂತ ಗೊತ್ತಿರುವುದರಿಂದ ಮದುವೆಯೇ ಬೇಡ ಅನ್ನುತ್ತಿದ್ದಾಳೆ. ಅವಳು ಬೇರೆ ಹುಡುಗನ ಜೊತೆ ಸಂತೋಷದಲ್ಲಿರುತ್ತಾಳೆ ಅನ್ನುವ ಭರವಸೆಯೂ ನನಗಿಲ್ಲ. ಅವಳು ಪ್ರೀತಿಸುವ ಹುಡುಗನಿಗೆ ಮದುವೆ ಮಾಡಿಕೊಡುವ ಧೈರ್ಯವೂ ನನಗಿಲ್ಲ. ಸಲಹೆ ಕೊಡಿ ಪ್ಲೀಸ್.

: ಮಗಳ ಮನಸ್ಸನ್ನು ತಾಯಿಯಷ್ಟು ಚೆನ್ನಾಗಿ ಅರಿಯಬಲ್ಲವರು ಬೇರೆ ಯಾರೂ ಇಲ್ಲ.  ಮುಖಚರ್ಯೆಯಿಂದಲೇ ಮಗಳ ಮನಸ್ಸಿನಲ್ಲಾಗುವ ತುಮುಲ ಗೊತ್ತಾಗುತ್ತದೆ ತಾಯಿಗೆ. ತಾಯಿಗೆ ಮಕ್ಕಳು ಸುಖವಾಗಿದ್ದರಷ್ಟೇ ನೆಮ್ಮದಿ. ನಿಮಗೀಗ ಮನೆಯವರ ವಿರುದ್ಧ ಹೋಗಿ ಮಗಳಿಗೆ ಸಪೋರ್ಟ್ ಮಾಡುವುದೂ ಕಷ್ಟ, ಮಗಳ ಸಂತೋಷವನ್ನು ಬಲಿಗೊಡುವುದೂ ನಿಮ್ಮ ಮನಸ್ಸಿಗೆ ಹಿಂಸೆಯೇ. ಅದೂ ಸೂಕ್ಷ್ಮ ಮನಸ್ಸಿನ ಮಗಳ ಭಾವನೆಗೆ ವಿರುದ್ಧವಾಗಿ ಹೋದರೆ ಅವಳು ಜೀವನಪರ್ಯಂತ ನೊಂದುಕೊಂಡರೆ ಎನ್ನುವ ಆತಂಕ ತಾಯಿಯಾದ ನಿಮಗಿರುವುದು ಸ್ವಾಭಾವಿಕ. ಇಲ್ಲಿ ಮುಖ್ಯವಾಗಿ ನೀವು ನೋಡಬೇಕಾಗಿರುವುದು ಒಂದು ವೇಳೆ ಮಗಳು ಅವಳು ಪ್ರೀತಿಸಿದ ಹುಡುಗನನ್ನೇ ಮದುವೆ ಆದರೆ ಅವಳು ಅಲ್ಲಿ ಸಂತೋಷದಿಂದ ಇರುತ್ತಾಳಾ ಅಂತ. ಆ ಹುಡುಗನ ಕುಟುಂಬಸ್ತರು ಅವಳನ್ನು ಸ್ವೀಕರಿಸುತ್ತಾರಾ? ಮಾಂಸಾಹಾರಿಗಳಾದ ಅವರು ಮಗಳಿಗೆ ಅದನ್ನು ತಯಾರಿಸುವಂತೆ ಒತ್ತಡ ಹೇರುವುದಿಲ್ಲವಾ? ಇದನ್ನೆಲ್ಲ ಅವಳ ಹುಡುಗನ ಹತ್ತಿರ ಮಾತಾಡಿ ಮೊದಲು ನಿಮಗಿರುವ ಗೊಂದಲ ದೂರ ಮಾಡಿಕೊಳ್ಳಿ.  ನಿಮಗೆ ಅವಳು ಅಲ್ಲಿ ಸುಖವಾಗಿರುತ್ತಾಳೆ ಎನ್ನುವ ಭರವಸೆ ಇದ್ದರೆ ನೀವು ನಿಮ್ಮ ಗಂಡನ ಹತ್ತಿರ ಮಗಳ ಪ್ರೀತಿಯ ವಿಷಯ ಮಾತಾಡಿ. ಅವಳ ಸುಖಸಂತೋಷಕ್ಕೋಸ್ಕರ ಅವರೂ ಈ ಸಂಬಂಧಕ್ಕೆ ಒಪ್ಪುವಂತೆ ಮನವೊಲಿಸಿ. ಒಂದು ವೇಳೆ ಮಗಳು ಆ ಹುಡುಗನ ಕುಟುಂಬದ ಜೊತೆ ಏಗುವುದು ಕಷ್ಟ ಅಂತ ಅನಿಸಿದರೆ ಅವಳಿಗೇ ಬುದ್ಧಿ ಹೇಳಿ.  ಮೊದಲು ಆ ಕೆಲಸ ಬಿಡುವಂತೆ ಒತ್ತಾಯಿಸಿ. ಅವನ ಸಂಪರ್ಕದಿಂದ ದೂರ ಇರುವಂತೆ ನೋಡಿಕೊಳ್ಳಿ. ಕ್ರಮೇಣ ಅವಳ ಮನಸ್ಸಿನಿಂದ ಅವನು ದೂರವಾದರೆ ಬೇರೆಯವರ ಜೊತೆ ಮದುವೆ ಮಾಡುವುದು ಸುಲಭವಾಗಬಹುದು. ಯಾವುದಕ್ಕೂ ಗಡಿಬಿಡಿಯಂತೂ ಮಾಡಬೇಡಿ.