ಮುದ್ರಣಾಲಯದಿಂದ ನೇರವಾಗಿ ಖದೀಮರ ಕೈಗೆ ನೋಟು ಹೋಗಲು ಹೇಗೆ ಸಾಧ್ಯ

ನವೆಂಬರ್ 8, 2016ರಂದು ನೋಟು ಅಪನಗದೀಕರಣವನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದರು. ಕಾಳಧನ ಮತ್ತು ಕಳ್ಳನೋಟುಗಳ ನಿರ್ಬಂಧನೆಯೇ ಇದರ ಪ್ರಮುಖ ಉದ್ದೇಶವಾಗಿತ್ತು. ಆzರೆ ಈಗಿನ ಪರಿಸ್ಥಿತಿ ನೋಡಿದರೆ ನಮ್ಮ ಬೆಳೆಯುವ ಆರ್ಥಿಕತೆಗೆ ಬಹುದೊಡ್ಡ ಹೊಡೆತ ಬೀಳುವ ಸೂಚನೆ ಕಂಡುಬರುತ್ತಿದೆ. ಸುಮಾರು ನಾಲ್ಕು ಲಕ್ಷದಿಂದ ಲಕ್ಷ ಕೋಟಿಗಳಷ್ಟು ಕಾಳಧನ ಸಂಗ್ರಹವಾಗುವ ನಿರೀಕ್ಷೆಯಿತ್ತು. ಆದರೆ ಚಲಾವಣೆಯಲ್ಲಿ ಇದ್ದ ಸುಮಾರು 15 ಲಕ್ಷ ಕೋಟಿ ಹಣದಲ್ಲಿ 14.95 ಲಕ್ಷ ಕೋಟಿ ಹಣ ಬ್ಯಾಂಕಿನಲ್ಲಿ ಜಮೆಯಾಗಿದೆ. ಅಂದರೆ ಶೇಕಡ 97ರಷ್ಟು ಹಣ ಹಿಂತಿರುಗಿ ಬಂದಿದೆ. ಹಾಗಾದರೆ ಕಾಳಧನ ಎಲ್ಲಿ ಹೋಯಿತು ?
ನೋಟು ಬದಲಾವಣೆಯಲ್ಲಿ ರಾಜಕಾರಣಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದಕ್ಕೆ ಪೂರಕ ಎಂಬಂತೆ ಮುದ್ರಣಾಲಯದಿಂದಲೇ ನೇರೆ ದೊಡ್ಡ ದೊಡ್ಡ ಕುಳಗಳ ಕೈಗೆ ಹೊಸ ನೋಟು ಸೇರಿದೆ ಎಂಬ ಸುದ್ದಿ ಬಹಳ ಆಘಾತಕಾರಿ ಮತ್ತು ಆತಂಕಕಾರಿಯಾಗಿದೆ. ರಿಸರ್ವ್ ಬ್ಯಾಂಕಿನ ಲೆಕ್ಕಕ್ಕೆ ಬಾರದೆ ಈ ರೀತಿ ಎಷ್ಟು ಹಣ ಮುದ್ರಣಾಲಯದಿಂದ ಹೊರಬಿದ್ದಿದೆ ಎಂಬುದಕ್ಕೆ ಲೆಕ್ಕ ಎಲ್ಲಿದೆ ? ಅದರ ಹೊಣೆಗಾರಿಕೆ ಯಾರು ಹೊರುತ್ತಾರೆ ? ನಮ್ಮ ನಿಮ್ಮ ಕೈಯಲ್ಲಿರುವ ನೋಟಿನ ಬೆಲೆ ಎಷ್ಟು ? ಅದು ಸಾಚಾವೇ ಖೋಟಾವೋ ಎಂದು ತಿಳಿಸುವವರು ಯಾರು ? ಮನಬಂದಂತೆ ಮುದ್ರಿಸಿ ಕಳುಹಿಸಿರಬಹುದಲ್ಲವೇ ? ಹಾಗಾದರೆ ರಿಸರ್ವ್ ಬ್ಯಾಂಕಿನ ಅಗತ್ಯವೇನು ? ಬ್ಯಾಂಕಿನ ಗವರ್ನರ್ ಹೇಳುವಂತೆ ನೋಟು ಅಪನಗದೀಕರಣ ಅವರ ನಿರ್ಧಾರವಲ್ಲ, ಸರಕಾರದ್ದಂತೆ.
ಹಾಗಾದರೆ ಈ ನಿರ್ಧಾರ ಸರಕಾರ ತೆಗೆದುಕೊಳ್ಳಲು ಪಾರ್ಲಿಮೆಂಟಿನಲ್ಲಿ ಎಲ್ಲಿ ಚರ್ಚೆ ನಡೆದಿದೆ ? ತನ್ನ ಮನ ಬಂದ ನಿರ್ಧಾರ ಪ್ರಧಾನಿಯವರು ತೆಗೆದುಕೊಳ್ಳುವುದಾದರೆ ಸರಕಾರದ ಅಗತ್ಯವೇನು ? ಜನರು ಸಣ್ಣ ಸಣ್ಣ ಉದ್ಯೋಗಿಗಳು ವ್ಯಾಪಾರಸ್ಥರು ಪಟ್ಟ ಕಷ್ಟಗಳಿಗೆ ಯಾರು ಹೊಣೆ ? ಇದನ್ನೇ ತುಘಲಕ್ ರಾಜ್ಯವೆನ್ನುವುದು. ಈ ರೀತಿ ನಡೆದರೆ ದೇಶದ ಆರ್ಥಿಕ ಪರಿಸ್ಥಿತಿ ಏನಾಗಬಹುದು ? ಈ ಸಮಯದಲ್ಲಿ ನಮ್ಮ ಮಾಜಿ ಪ್ರಧಾನಿ ಮನಮೋಹನ್‍ಸಿಂಗರ ` ನೋಟು ಅಪನಗದೀಕರಣ ಒಂದು ಮಾನ್ಯುಮೆಂಟಲ್ ಮಿಸ್ಟೇಕ್’ ಎಂಬ ಮಾತು ಸತ್ಯವಾಗಿ ತೋರಿಬರುತ್ತಿದೆ

  • ಟಿ ಕೆ ಎಸ್ ರಾವ್  ಕಿನ್ನಿಮುಲ್ಕಿ ಉಡುಪಿ