ಉದ್ಯೋಗ ಕೊಡಿಸುವುದಾಗಿ ನಂಬಿಸಿ ಗೃಹಿಣಿಗೆ ವಂಚನೆ

ಮೋಸ ಹೋದ ರಮಲತಾ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶವಿದೆ. ಬ್ಯಾಂಕ್, ಸರಕಾರಿ ಕಚೇರಿ, ವಿದೇಶಗಳಲ್ಲಿ ಅತ್ಯುತ್ತಮ ನೌಕರಿ, ಕೈತುಂಬ ಸಂಬಳ. ನೌಕರಿ ಗ್ಯಾರಂಟಿ ಎಂಬಿತ್ಯಾದಿ ಬರೆದಿರುವ ಕ್ಲಾಸಿಫೈಡ್ ಜಾಹೀರಾತನ್ನು ಪತ್ರಿಕೆಗಳಲ್ಲಿ ನೋಡಿದ ಮಂದಿ ಬ್ಯಾಂಕಿನಲ್ಲಿ ಒಳ್ಳೆಯ ಕೆಲಸ ಸಿಗುತ್ತದೆ ಎಂದು ಮೋಸ ಹೋಗುತ್ತಿದ್ದಾರೆ. ಅಮಾಯಕ ಮಂದಿ ಇವೆಲ್ಲ ನಕಲಿ ಸಂಸ್ಥೆಗಳು ಎನ್ನುವ ಅರಿವಿಗೆ ಬರುವ ಮುನ್ನವೇ ಸಾವಿರಾರು ದುಡ್ಡು ಕಳೆದುಕೊಂಡಿರುತ್ತಾರೆ. ಪತ್ರಿಕೆಗಳಲ್ಲಿ ಬರುವ ಜಾಹೀರಾತುಗಳು ವಿಶ್ವಾಸಾರ್ಹವೇ ಆಗಿದ್ದರೂ, ಸಾರ್ವಜನಿಕರು ಈ ಬಗ್ಗೆ ಖಚಿತ ಪಡಿಸಿಕೊಂಡೇ ವ್ಯವಹಾರ ನಡೆಸಲು ಮುಂದಾಗಬೇಕು.

ಮಣಿಪಾಲದಿಂದ ಹೊರಡುವ ದಿನಪತ್ರಿಕೆಯಲ್ಲಿ ಇದೇ ರೀತಿಯ ಜಾಹೀರಾತನ್ನು ಕಂಡು ಮಧ್ಯಮ ವರ್ಗದ ಗೃಹಿಣಿಯೊಬ್ಬಳು ಮೋಸ ಹೋದ ಘಟನೆ ಬೆಳಕಿಗೆ ಬಂದಿದೆ. ನೇರ ನೇಮಕಾತಿ ಆಸೆಯಿಂದ ದುಪ್ಪಟ್ಟು ಹಣವನ್ನು ಖರ್ಚುಮಾಡಿ  ಬೆಂಗಳೂರಿಗೂ ಹೋಗಿದ್ದ ಇವರು ಇದೀಗ ತಾವು ಮೋಸ ಹೋಗಿರುವುದರ ಅರಿವಾಗಿ ಪಶ್ಚಾತ್ತಾಪ ಪಡುತ್ತಿದ್ದಾರೆ. ಈ ಬಗ್ಗೆ ಕದ್ರಿ ಠಾಣೆಗೂ ದೂರು ನೀಡಿದ್ದಾರೆ.

ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಅವಕಾಶವಿದೆ ಎನ್ನುವ ಜಾಹೀರಾತು ಕಂಡ ನಗರದ ನಂತೂರಿನ ನಿವಾಸಿ ರಮಲತಾ, ಪಿಯುಸಿ, ಡಿಗ್ರಿ ಓದಿರುವ ತನ್ನ ಮಕ್ಕಳಿಗೆ ಉದ್ಯೋಗ ಕೊಡಿಸಲು ಯತ್ನಿಸಿ ವಂಚನೆಗೆ ಒಳಗಾಗಿದ್ದಾರೆ. `ಬ್ಯಾಂಕಿನಲ್ಲಿ ಉದ್ಯೋಗ ಇದೆ. ಈ ನಂಬರಿಗೆ ಸಂಪರ್ಕಿಸಿ, ನೇರ ನೇಮಕಾತಿ’ ಎಂದು ಸತತ ಮೂರು ದಿನ ಜಾಹೀರಾತು ಬಂದಿದ್ದರಿಂದ ನಂಬಿದ್ದ ರಮಲತಾ ಇದನ್ನು ನಿಜವೆಂದು ನಂಬಿ ಆ ನಂಬರಿಗೆ ಫೋನ್ ಮಾಡಿದ್ದರು. ಕರೆ ಸ್ವೀಕರಿಸಿದ ವಂಚಕರು ಬೆಂಗಳೂರಿಗೆ ಬರುವಂತೆ ತಿಳಿಸಿದ್ದರು. ಅದರಂತೆ ಇಬ್ಬರು ಮಕ್ಕಳ ಜೊತೆ ಅವರು ಬೆಂಗಳೂರಿಗೆ ತೆರಳಿದ್ದಳು. ಫೋನಿನಲ್ಲಿ ಹೇಳಿದ ವಿಳಾಸಕ್ಕೆ ಹೋಗುತ್ತಿದ್ದಂತೆ ಬರಮಾಡಿಕೊಂಡ ಮೂರು ಮಂದಿ, ನೀವು ಸೆಲೆಕ್ಟ್ ಆಗಿದ್ದೀರಿ. ಎಪ್ಲಿಕೇಶನ್ ಫೀಸ್ ಅಂತಾ ಇಬ್ಬರಿಗೆ ತಲಾ 1,500 ರೂಪಾಯಿನಂತೆ ಕೊಡಿ ಅಂದರು. ಅದಕ್ಕೆ ಮಲ್ಲೇಶ್ವರಂ ವಿಳಾಸ ಹೊಂದಿರುವ ರಕ್ಷಾ ಎಂಟರಪ್ರೈಸಸ್ ಅನ್ನೋ ಹೆಸರಲ್ಲಿ ರಶೀದಿಯನ್ನೂ ನೀಡಿದ್ದಾರೆ. ಇದನ್ನು ನಂಬಿ, ಹೇಳಿದ ಮೊತ್ತ ಕೊಟ್ಟು ಬಂದಿದ್ದ ಕುಟುಂಬಕ್ಕೆ ಬಳಿಕ ವಂಚನೆ ಅರಿವಾಗಿದೆ.

ಎರಡು ದಿನದ ಬಳಿಕ ರಮಲತಾರಿಗೆ ಮಂಗಳೂರಿನ ಖಾಸಗಿ ಬ್ಯಾಂಕಿನಲ್ಲಿ ಉದ್ಯೋಗ ದೊರಕಿಸಿಕೊಡುತ್ತೇವೆಂದು ಹೇಳಿದ್ದರು. ಬೆಂಗಳೂರಿನಲ್ಲಿ ಖದೀಮರು ಕೊಟ್ಟ ದೂರವಾಣಿ ಕರೆಗೆ ಸಂಪರ್ಕಿಸಿದಾಗ ಅಲ್ಲಿಗೊಮ್ಮೆ ಬನ್ನಿ, ಇಲ್ಲಿಗೊಮ್ಮೆ ಬನ್ನಿ ಎಂದು ಸುತ್ತಾಡಿಸಿದ್ದರು. ಇದರಿಂದ ಆಕ್ರೋಶಗೊಂಡ ರಮಲತಾ ವಂಚನೆ ಮಾಡಿರುವ ಮೂವರು ಆರೋಪಿಗಳ ಹೆಸರನ್ನು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಆರೋಪಿಗಳ ಬಂಧಿಸಲಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಮೋಸ ಆಗಿದ್ದರಿಂದ ಅಲ್ಲೇ ದೂರು ಕೊಡುವಂತೆ ಪೊಲೀಸರು ಹೇಳಿದ್ದರಂತೆ. ಆನಂತರ ಮೇಲಧಿಕಾರಿಗಳ ಬಳಿಗೆ ಹೋಗುತ್ತೇನೆಂದಾಗ ದೂರು ದಾಖಲಿಸಿಕೊಂಡಿದ್ದು ಇನ್ನೂ ತನಿಖೆ ನಡೆಸಿಲ್ಲ ಎಂಬ ಆರೋಪ ಕೇಳಿಬಂದಿದೆ.