ಗೃಹಿಣಿಗೆ ಹಲ್ಲೆಗೈದು ಚಿನ್ನಾಭರಣ ಲೂಟಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರೈಲ್ವೇ ಕಾಲೊನಿಯಲ್ಲಿ ನಿವಾಸವನ್ನು ಹೊಂದಿರುವ ಅಂಬುಜಾಕ್ಷಿ (55) ಎಂಬವರಿಗೆ ಅಪರಿಚಿತ ಯುವಕನೊಬ್ಬ ಕಬ್ಬಿಣದ ಸರಳಿನಿಂದ ಹಲ್ಲೆ ಮಾಡಿ ಸುಮಾರು ಒಂದು ಲಕ್ಷ ರೂ ಮೌಲ್ಯದ 35 ಗ್ರಾಂ ಚಿನ್ನವನ್ನು ದರೋಡೆ ಮಾಡಿ ಓಡಿ ಹೋಗಿದ್ದಾನೆ.

ರೈಲ್ವೇ ಉದ್ಯೋಗಿಯಾಗಿರುವ ಪತಿ ಸಚ್ಚಿದಾನಂದ ಅವರು ಉದ್ಯೋಗಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಅಂಬುಜಾಕ್ಷಿ ಒಬ್ಬರೇ ಇರುವುದನ್ನು ಖಚಿತ ಮಾಡಿಕೊಂಡು ಬಂದಿದ್ದ ದುಷ್ಕರ್ಮಿ, ಈ ಕೃತ್ಯ ಎಸಗಿದ್ದಾನೆ.

ಪುತ್ರಿ ನವ್ಯಾ ಬೆಂಗಳೂರಿನಿಂದ ತಾಯಿ ಮೊಬೈಲಿಗೆ ಕರೆ ಮಾಡಿದಾಗ ಅಂಬುಜಾಕ್ಷಿ ಮಾತನಾಡುವ ಸ್ಥಿತಿಯಲ್ಲಿರಲ್ಲಿಲ್ಲ. ಶಂಕೆಗೊಂಡ ಅವರು ತಂದೆಗೆ ಕರೆ ಮಾಡಿದ್ದಾರೆ. ಸಚ್ಚಿದಾನಂದ ತಮ್ಮ ಮನೆ ಪಕ್ಕದ ಪಾಪಚ್ಚನ್-ಸುನೀತಾ ದಂಪತಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಕೂಡಲೇ ಅವರು ಮನೆಗೆ ಹೋಗಿ ಕಿಟಕಿ ಮೂಲಕ ನೋಡಿದಾಗ ಅಂಬುಜಾಕ್ಷಿ ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. 25 ವರ್ಷದ ಯುವಕನೊಬ್ಬ ಇವರನ್ನು ಕಂಡು ಓಡಿ ಹೋಗಿದ್ದಾನೆ.

ವಿಚಾರ ತಿಳಿಯುತ್ತಿದ್ದಂತೆ ಸಚ್ಚಿದಾನಂದ ಅವರು ಕೂಡಲೇ ಆಗಮಿಸಿ ಅಂಬುಜಾಕ್ಷಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಾಂಡೇಶ್ವರ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.