ಮುಸೋಡಿ ಅಧಿಕದಲ್ಲಿ ಮನೆ ಸಮುದ್ರಪಾಲು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮುಸೋಡಿ ಅಧಿಕದಲ್ಲಿ ಮತ್ತೆ ಕಡಲ್ಕೊರೆತ ತೀವ್ರಗೊಂಡಿದ್ದು, ಅಶ್ರಫ್ ಎಂಬವರ ಮನೆ ಕಡಲುಪಾಲಾಗಿದೆ.

ಇಲ್ಲಿಯ ನಿವಾಸಿಗಳಾದ ನಬೀಸಾ, ಅಬೂಬಕರ್, ಹನೀಫ್ ಎಂಬವರ ಮನೆಗಳು ಇದೀಗ ಸಮುದ್ರಪಾಲಾಗುವ ಭೀತಿಯಲ್ಲಿದೆ. ಮೂರು ತಿಂಗಳುಗಳ ಹಿಂದೆ ಇಲ್ಲಿನ ಹಾರ್ಬರ್ ಪರಿಸರದ ಅಬ್ದುಲ್ ಖಾದರ್, ಶಾಹುಲ್ ಹಮೀದ್, ಮೊಯ್ದೀನ್ ಕುಂಞ ಖದೀಜ, ಅಬ್ದುಲ್ ಖಾದರ್ ಕುಂಬಳೆ ಇವರ ಮನೆಗಳು ಕಡಲ್ಕೊರೆತದಿಂದ ಸಮುದ್ರಪಾಲಾಗಿದ್ದವು. ಆ ಸಂದರ್ಭ ಅಧಿಕೃತರು ಭೇಟಿ ನೀಡಿ ಹೊಸ ಮನೆ ಸಹಿತ ನೆರವಿನ ಭರವಸೆ ನೀಡಿದ್ದರು.

ಆದರೆ ಈವರೆಗೆ ನೀಡಿದ ಭರವಸೆಗಳು ಈಡೇರಿಲ್ಲವೆಂದು ನೊಂದವರು ಅವಲತ್ತುಕೊಂಡಿದ್ದಾರೆ. ಈ ಕುಟುಂಬಗಳು ಈಗ ಮಸೋಡಿ ಅಧಿಕದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿವೆ.