ಮನೆ ಬೆಂಕಿಗಾಹುತಿ

ಬೆಂಕಿಗಾಹುತಿಯಾದ ಮನೆ ಹೊರಗೆ ಸುಟ್ಟುಹೋದ ಸೊತ್ತುಗಳು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮನೆಗೆ ಬೆಂಕಿ ತಗುಲಿ ಭಸ್ಮಗೊಂಡ ಘಟನೆ ನೆಕ್ರಾಜೆ ಬಳಿ ನಡೆದಿದೆ. ನೆಕ್ರಾಜೆ ಬೆಳ್ಳಾರ್ಮೆ ಹೌಸಿನ ಸತೀಶ ಮತ್ತು ಕುಟುಂಬ ವಾಸಿಸುವ ಹೆಂಚಿನ ಮನೆಗೆ ಶುಕ್ರವಾರ ರಾತ್ರಿ ಬೆಂಕಿ ತಗುಲಿ ನಾಶಗೊಂಡಿದೆ.

ಮನೆಯೊಳಗಿದ್ದ ಎರಡೂವರೆ ಪವನ್ ಚಿನ್ನದೊಡವೆ, ನಗದು ಸಹಿತ ಹಲವು ಬೆಲೆಬಾಳುವ ವಸ್ತುಗಳ ಸಹಿತ  ಆಧಾರ್, ಗುರುತು ಪತ್ರದ ದಾಖಲೆ, ಭೂ ದಾಖಲೆಪತ್ರ, ಪೀಠೋಪಕರಣಗಳು ಸಹಿತ ಎಲ್ಲವೂ ಉರಿದು ಗೋಡೆ  ಮಾತ್ರವೇ ಉಳಿದುಕೊಂಡು ಕುಟುಂಬ ನಿರ್ಗತಿಕವಾಗಿದೆ.

ಕಾಸರಗೋಡು ಅಗ್ನಿಶಾಮಕದಳದ ಎರಡು ವಾಹನ ಬಂದು ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದ ಬೆಂಕಿ ತಗಲಿರಬಹುದೆಂದು ಅಗ್ನಿಶಾಮಕದ ಸಿಬ್ಬಂದಿ ಶಂಕಿಸಿದ್ದಾರೆ. ಇದರಿಂದ ಲಕ್ಷಾಂತರ ರೂ ನಷ್ಟ ಅಂದಾಜಿಸಲಾಗಿದೆ. ಬೆಂಕಿ ತಗಲುವ ವೇಳೆ ಮನೆಯಲ್ಲಿದ್ದವರು ಹೊರಗೆ ಓಡಿ ಹೋದರಿಂದ ಪ್ರಾಣಾಪಾಯ ತಪ್ಪಿದೆ.