ಕೊಟ್ಟಿಗೆ, ಮನೆ ಬೆಂಕಿಗಾಹುತಿ

ಆಕಸ್ಮಿಕ ಬೆಂಕಿಗೆ ಆಹುತಿಯಾದ ಮನೆ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಅಳದಂಗಡಿ ಸಮೀಪದ ನಡಾಯಿ ಒಬ್ಬೆದೊಟ್ಟು ಎಂಬಲ್ಲಿನ ವಾರಿಜಾ ಆಚಾರ್ದಿ ಎಂಬವರ ಮನೆ ಮಂಗಳವಾರ ತಡರಾತ್ರಿ ಅರ್ಧ ಸುಟ್ಟು ಹೋಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ವಾರಿಜಾ (75) ಎಂಬವರು ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಮಂಗಳವಾರ ಬೆಳಿಗ್ಗೆ ಕಲ್ಲಡ್ಕದಲ್ಲಿರುವ ಮಗಳ ಮನೆಗೆ ಹೋಗಿದ್ದರು ಎನ್ನಲಾಗಿದೆ. ಮಧ್ಯರಾತ್ರಿಯ ಬಳಿಕ ಬೆಂಕಿ ತಗುಲಿ ಮೊದಲಿಗೆ ಮನೆಯ ಹಿಂಬದಿಯಲ್ಲಿನ ಕಟ್ಟಿಗೆ ಸಂಗ್ರಹದ ಕೊಟ್ಟಿಗೆಗೆ ತಗುಲಿ ಕೊಟ್ಟಿಗೆ ಭಸ್ಮವಾಗಿದೆ. ಕೊಟ್ಟಿಗೆ ಸಮೀಪವಿದ್ದ ಫೈಬರ್ ನೀರಿನ ತೊಟ್ಟಿ, ಕೊಳವೆಗಳು ಬೆಂಕಿಯಲ್ಲಿ ಕರಗಿಹೋಗಿದೆ.

ಬಳಿಕ ಬೆಂಕಿಯ ಕೆನ್ನಾಲಗೆಗಳು ಮನೆಯ ಪಕ್ಕಾಸುಗಳಿಗೆ ವ್ಯಾಪಿಸಿ ಹಂಚಿನ ಮನೆ ಅರ್ಧ ಸುಟ್ಟಿದೆ. ಸನಿಹದ ಮನೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ದಳದ ಸಿಬ್ಬಂದಿ ಬಂದು ಮನೆಯ ಇನ್ನುಳಿದ ಭಾಗ ಸುಟ್ಟುಹೋಗುವುದನ್ನು ತಪ್ಪಿಸಿದ್ದಾರೆ.