ಹಾಡಹಗಲೇ ಮನೆ ದೋಚಿದ ಕಳ್ಳರು

ಲಕ್ಷಾಂತರ ರೂ ಸೊತ್ತು ಚೋರರಪಾಲು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ತಾಲೂಕಿನ ಬಿ ಸಿ ರೋಡು ನಿವಾಸಿ, ದಸ್ತಾವೇಜು ಬರಹಗಾರ ಕೆ ಪಿ ಬನ್ನಿಂತಾಯ ಅವರ ಮನೆಗೆ ಬುಧವಾರ ಹಾಡಹಗಲೇ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಕೆ ಪಿ ಬನ್ನಿಂತಾಯ ಹಾಗೂ ಅವರ ಪುತ್ರ ನ್ಯಾಯವಾದಿ ರಾಘವೇಂದ್ರ ಬನ್ನಿಂತಾಯ ಅವರು ಬುಧವಾರ ಎಂದಿನಂತೆ ಕಚೇರಿಗೆ ತೆರಳಿದ್ದರೆ, ಸೊಸೆ ಕೂಡಾ ಕೆಲಸಕ್ಕೆ ತೆರಳಿದ್ದರು. ಮಕ್ಕಳು ಶಾಲೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಉಪಯೋಗಿಸಿಕೊಂಡ ಕಳ್ಳರು ಮಧ್ಯಾಹ್ನ 2.30ರಿಂದ 3.30ರ ಮಧ್ಯೆ ಈ ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ.

ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕೋಣೆಯಲ್ಲಿದ್ದ ಕಪಾಟುಗಳನ್ನು ಒಡೆದು ಅದರಲ್ಲಿದ್ದ 15 ಪವನ್ ಚಿನ್ನಾಭರಣ, ಒಂದು ಜತೆ ವಜ್ರದ ಬೆಂಡೋಲೆ, 40 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಕಳ್ಳರು ಮನೆಯಿಂದ ಹೊರ ಹೋಗುವ ವೇಳೆ ಗೇಟಿನ ಶಬ್ದ ಕೇಳಿ ಸಮೀಪದ ಮನೆಯ ಗೃಹಿಣಿ ಹೊರಗೆ ಬಂದು ನೋಡುತ್ತಿದ್ದಂತೆ ಮೂವರು ಅಪರಿಚಿತ ವ್ಯಕ್ತಿಗಳು ಬನ್ನಿಂತಾಯ ಅವರ ಮನೆಯ ಗೇಟ್ ಹಾರಿ ಬಸ್ ನಿಲ್ದಾಣದತ್ತ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ತಕ್ಷಣ ಅವರು ವಕೀಲ ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ್ದು, ಬಸ್ ನಿಲ್ದಾಣ ಸಹಿತ ಪರಿಸರದಾದ್ಯಂತ ಹುಡುಕಾಡಿದರೂ ಕಳ್ಳರ ಸುಳಿವು ಪತ್ತೆಯಾಗಿಲ್ಲ. ಬಳಿಕ ಬಂಟ್ವಾಳ ನಗರ ಠಾಣೆಗೆ ಸುದ್ದಿ ರವಾನಿಸಲಾಗಿದ್ದು, ಪೊಲೀಸರ ಸಹಿತ ಶ್ವಾನದಳ, ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದೆ. ಮನೆಯಿಂದ ಕಳ್ಳರು ದೋಚಿದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 4.50 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.