ಹೊಟೇಲ್ ಉದ್ಯಮಿ ಕಾನೆ ರವಿ ಇನ್ನಿಲ್ಲ

ಕರಾವಳಿ ಅಲೆ ವರದಿ

ಮಂಗಳೂರು : ಪ್ರಸಿದ್ದ ಹೋಟೆಲ್ ಉದ್ಯಮಿ 56 ವರ್ಷದ ಕೆ ರವೀಂದ್ರನಾಥ ಶೆಟ್ಟಿ ಕಿಡ್ನಿ ವೈಫಲ್ಯದಿಂದ ಮಂಗಳವಾರ ವಿಧಿವಶರಾಗಿದ್ದು, ಕಾನೆ ರವಿ ಎಂದೇ ಚಿರಪರಿಚಿತರಾಗಿರುವ ಇವರು ಪತ್ನಿ ಕಿರಣ ಮತ್ತು ಒಬ್ಬ ಗಂಡು ಮತ್ತು ಒಬ್ಬಳು ಹೆಣ್ಣು ಮಗಳನ್ನು ಅಗಲಿದ್ದಾರೆ.

ರವೀಂದ್ರನಾಥರ ಮಂಗಳೂರಿಯನ್ ಲೇಡಿ ಫಿಷ್ ಮಸಾಲ ಅವರಿಗೆ ಕಾನೆ ರವಿ ಎಂಬ ಅಡ್ಡ ಹೆಸರನ್ನು ನೀಡಿದ್ದು, ಈ ಮೂಲಕ ಮೀನು ಪ್ರಿಯರ ಅತೀವ ಪ್ರೀತಿಗೆ ಪಾತ್ರರಾಗಿದ್ದರು. ಇಷ್ಟು ಮಾತ್ರವಲ್ಲದೆ ಮಂಗಳೂರು ತುಪ್ಪ ರೋಸ್ಟ್ ಎಂಬ ತಿನಿಸು ಭಾರೀ ಜನರನ್ನು ಆಕರ್ಷಿಸಿದೆ.

ಅವರ ತಾಯಿ ಪದ್ಮಾವತಿ ಈ ತಿನಿಸನ್ನು ಕಂಡುಹಿಡಿದಿದ್ದು, ಅವರ ಕುಟುಂಬ ನಡೆಸುತ್ತಿರುವ ರೆಸ್ಟಾರೆಂಟುಗಳಲ್ಲಿ ಈ ತಿನಿಸು ಜನಪ್ರಿಯವಾಗಿದೆ.

ರವೀಂದ್ರನಾಥ ಶೆಟ್ಟಿ ಎಪ್ರಿಲ್ 19 1962ರಲ್ಲಿ ಜನಿಸಿದ್ದು, ತೇಜಪ್ಪ ಶೆಟ್ಟಿಯವರ ಕಿರಿಯ ಮಗ. ತೇಜಪ್ಪ ಶೆಟ್ಟಿಯವರು ಕುಂದಾಪುರ ಶೆಟ್ಟಿ ಲಂಚ್ ಹೋಮ್ ಮತ್ತು ಮಂಗಳೂರಿನ ಅನುಪಮ ರೆಸ್ಟಾರೆಂಟಿನ ಸಂಸ್ಥಾಪಕರು.

ಹಿರಿಯ ಸಹೋದರ ಮೂರು ವರ್ಷದ ಹಿಂದೆ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ತೇಜಪ್ಪರು 1958ರಲ್ಲಿ ಕುಂದಾಪುರದಲ್ಲಿ ಶೆಟ್ಟಿ ಲಂಚ್ ಹೋಮನ್ನು ಪ್ರಾರಂಭಿಸಿದರು.

ಮಗ ಬೆಳೆಯುತ್ತಿದ್ದಂತೆ ಅವರು 1973ರಲ್ಲಿ ಮಂಗಳೂರಿನಲ್ಲಿ ಹೋಟೆಲ್ ಉಷಾದಲ್ಲಿ ಅನುಪಮ ರೆಸ್ಟಾರೆಂಟನ್ನು ತೆರೆದರು. ಅವರ ಸ್ವಾದಿಷ್ಟಕರವಾದ ಮೀನು ಮಸಾಲ ಶೀಘ್ರದಲ್ಲೇ ಮಂಗಳೂರಿಗರನ್ನು ಸೆಳೆಯಿತು, ರೆಸ್ಟಾರೆಂಟ್ ಎದುರು ಉದ್ದದ ಕ್ಯೂ ಕಾಣಿಸಲಾರಂಭಿಸಿತು. ಹೀಗೆ ಅವರು ಕಾನೆ ರವಿ ಎಂದೇ ಜನಪ್ರಿಯರಾಗಿದ್ದರು.

 

LEAVE A REPLY