ಪತ್ನಿಯ ಉಸಿರುಗಟ್ಟಿಸಿ ಸಾಯಿಸಿ ಶವ ಸುಟ್ಟ ಹೋಟೆಲಿಗನ ಬಂಧನ

ಬೆಂಗಳೂರು : ಒಂದು ತಿಂಗಳ ಹಿಂದೆ ತನ್ನ 29 ವರ್ಷದ ಪತ್ನಿಯನ್ನು  ಉಸಿರುಗಟ್ಟಿಸಿ ಸಾಯಿಸಿ ನಂತರ ತನ್ನ ಉದ್ಯೋಗಿಯೊಬ್ಬನ ಸಹಾಯದೊಂದಿಗೆ ಆಕೆಯ ಶವವನ್ನು ಹೊಸೂರು ಸಮೀಪದ ಅರಣ್ಯ ಪ್ರದೇಶದಲ್ಲಿ ಸುಟ್ಟು ಹಾಕಿದ ಆರೋಪದ ಮೇಲೆ ಪೊಲೀಸರು  ನಗರದ ಹೋಟೆಲ್ ಉದ್ಯಮಿಯೊಬ್ಬನನ್ನು ಬಂಧಿಸಿದ್ದಾರೆ.

ಆರೋಪಿ ಚಂದ್ರಕಾಂತ್ ಎಸ್ ಕೊಂಡ್ಲಿ (39) ಶಾಂತಿನಗರದಲ್ಲಿರುವ ಸಿಲ್ವರ್ ಸ್ಪೂನ್ ಬಾರ್ ಎಂಡ್ ರೆಸ್ಟಾರೆಂಟಿನ ಸಹ ಪಾಲುದಾರನಾಗಿದ್ದಾನೆ. ಕೊಲೆಗೀಡಾದ ಅಕ್ಷತಾ ವಿಪ್ರೋದ ಎಚ್ ಆರ್ ವಿಭಾಗದಲ್ಲಿ ಡಿಸೆಂಬರ್‍ತನಕ ಕೆಲಸ ಮಾಡಿದ್ದರು.

ಆಕೆಯ ಕೊಲೆಯನ್ನು ಮುಚ್ಚಿ ಹಾಕಲು ಚಂದ್ರಕಾಂತಗೆ ಸಹಾಯ ಮಾಡಿದ ರಾಜವಿಂದರ್ ಸಿಂಗ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಅಕ್ಷತಾಳ ಅರೆಸುಟ್ಟ ದೇಹ ಹೊಸೂರು ಸಮೀಪ ಪತ್ತೆಯಾಗಿದೆ.

ಚಂದ್ರಕಾಂತ್ ಹಾಗೂ ಅಕ್ಷತಾ  ಮದುವೆಯಾಗಿ 10 ವರ್ಷಗಳಾಗಿದ್ದು ಹೆಬ್ಬಾಳ-ಕೆಂಪಾಪುರದ ವಿನಾಯಕ ಲೇಔಟಿನ ಮನೆಯಲ್ಲಿ ತಮ್ಮ ನಾಲ್ಕು ವರ್ಷದ ಪುತ್ರನೊಂದಿಗೆ ವಾಸವಾಗಿದ್ದರು. ಅಕ್ಷತಾ ಶಿರಸಿಯವರಾಗಿದ್ದರೆ ಚಂದ್ರಕಾಂತ್ ಕಾರವಾರ ಮೂಲದವನಾಗಿದ್ದ. ಅಕ್ಷತಾ ಜನವರಿ 6ರಿಂದಲೇ ನಾಪತ್ತೆಯಾಗಿದ್ದರೂ ಆರೋಪಿಗಳನ್ನು ಶನಿವಾರ ಬಂಧಿಸಿದ ನಂತರವಷ್ಟೇ ಈ ಭಯಾನಕ ಕೊಲೆ ರಹಸ್ಯ ಬಹಿರಂಗಗೊಂಡಿತ್ತು.

ಜನವರಿ 6ರ ರಾತ್ರಿ ತಾವಿಬ್ಬರೂ ಮದ್ಯ ಸೇವಿಸಿದ್ದು ಈ ಸಂದರ್ಭ ಆಕೆಗೆ  ಅನೈತಿಕ ಸಂಬಂಧವಿದೆಯೆಂದು ತಾನು ಆರೋಪಿಸಿದಾಗ ಜಗಳವುಂಟಾಗಿದ್ದು, ಸಿಟ್ಟಿನ ಭರದಲ್ಲಿ ತಲೆದಿಂಬಿನ ಸಹಾಯದಿಂದ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಗಿ ಚಂದ್ರಕಾಂತ್ ಪೊಲೀಸರೆದುರು ಬಾಯ್ಬಿಟ್ಟಿದ್ದಾನೆ. ಘಟನೆ ನಡೆದಾಗ ದಂಪತಿಯ ಪುತ್ರ ತನ್ನ ಅಜ್ಜಿಯೊಂದಿಗೆ ಸಹಕಾರನಗರದಲ್ಲಿದ್ದ.

ನಂತರ ಅಕ್ಷತಾಳ ಸೆಲ್ ಫೋನನ್ನು ರಾಜವಿಂದರನಿಗೆ ನೀಡಿ ಆತನನ್ನು ಚಂದ್ರಕಾಂತ್ ಪಂಜಾಬದ ಆತನ ಹುಟ್ಟೂರಿಗೆ ಕಳುಹಿಸಿ, ತನ್ನೊಂದಿಗೆ ಜಗಳವಾಡಿ ಅಕ್ಷತಾ ಮನೆ ಬಿಟ್ಟು ಹೋಗಿದ್ದಾಳೆಂದು ಅತ್ತೆಗೆ ಸುಳ್ಳು ಹೇಳಿದ್ದ. ಕೆಲ ದಿನಗಳ ನಂತರ ಬೇರೊಂದು ಕಥೆ ಕಟ್ಟಿದ ಆತ ಆಕೆ ಮನೆಯಿಂದ ರೂ 50,000 ತೆಗೆದುಕೊಂಡು ಹೋಗಿದ್ದಾಳೆ, ಪ್ರವಾಸ ಹೋಗಿರಬಹುದು ಎಂದಿದ್ದ.

ಪೊಲೀಸರು ಚಂದ್ರಕಾಂತನನ್ನು ಸಂಶಯದಿಂದ ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ಸತ್ಯ ಹೊರಬಂದಿತ್ತು.

 

LEAVE A REPLY