ಮಾಲಕಿ ಕೋಪಕ್ಕೆ ಕೆಲಸದಾಳು ಬಲಿ

ಹೋಟೆಲಿನಿಂದ ನೆಲಕ್ಕೆ ಬಿದ್ದು ಸಾವನ್ನಪ್ಪಿದ ರಾಜಶ್ರೀ

ಹೋಟೆಲ್ ಓನರ್ ಕಾರ್ಮಿಕೆಯನ್ನು ಅಟ್ಟಾಡಿಸಿದಾಗ ನಡೆದ ದುರ್ಘಟನೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಹೋಟೆಲ್ ಮಾಲಕಿ ಮತ್ತು ಕೆಲಸದಾಳು ಮಹಿಳೆ ಮಧ್ಯೆ ನಡೆದ ಜಗಳದಲ್ಲಿ ಮಾಲಕಿಯು ಕೆಲಸದಾಳು ಮಹಿಳೆಯನ್ನು ಅಟ್ಟಾಡಿಸಿಕೊಂಡು ಬರುತ್ತಿದ್ದ ವೇಳೆ ಕೆಲಸದಾಳು ಹೋಟೆಲಿನ ಮಹಡಿಯಿಂದ ಆಯಾ ತಪ್ಪಿ ನೆಲಕ್ಕೆ ಬಿದ್ದು ಮೃತಪಟ್ಟ ಘಟನೆ ನಗರದ ಕಡಿಯಾಳಿ ಸಚ್ಚಿದಾನಂದ ರೆಸಿಡೆನ್ಸಿ ಅಪಾರ್ಟಮೆಂಟಿನಲ್ಲಿರುವ ಅನ್ನಪೂಣೇಶ್ವರಿ ಹೋಟೆಲಿನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಹೋಟೆಲ್ ಎದುರು ಸೇರಿದ ಜನ
ಹೋಟೆಲ್ ಎದುರು ಸೇರಿದ ಜನ

ಅನ್ನಪೂಣೇಶ್ವರಿ ಹೋಟೆಲಿನ ಕೆಲಸದಾಳು, ಉಡುಪಿ ನಗರದ ಹೊರವಲಯದ ಉದ್ಯಾವರ ಬೊಳ್ಜೆ ನಿವಾಸಿ ರಾಜಶ್ರೀ ಪೂಜಾರ್ತಿ (60) ಮೃತ ದುರ್ದೈವಿ. ರಾಜಶ್ರೀಯು ವಾರದ ಹಿಂದೆ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಗುರುವಾರ ಮಧ್ಯಾಹ್ನ ಹೋಟೆಲ್ ಮಾಲಕಿ ಮಂಗಳೂರು ಮೂಲದ ಸುರತ್ಕಲ್ ನಿವಾಸಿ ಕಮ್ ಮಾಜಿ ಪೊಲೀಸ್ ರೋಹಿತಾ ಪುತ್ರನ್ ಮತ್ತು ಕೆಲಸದಾಳು ರಾಜಶ್ರೀ ಮಧ್ಯೆ ಯಾವುದೋ ಕಾರಣಕ್ಕೆ ಜಗಳ ನಡೆದಿದೆ. ಈ ಸಂದರ್ಭ ಹೋಟೆಲ್ ಮಾಲಕಿ ರೋಹಿತಾ ಪುತ್ರನ್ ರಾಜಶ್ರೀಯನ್ನು ಅಟ್ಟಾಡಿಸಿ ಓಡಿಸಿಕೊಂಡು ಹೋಗಿದ್ದು, ಆ ವೇಳೆ ರಾಜಶ್ರೀಯು ಹೋಟೆಲ್ ಬೇಸ್ಮೆಮೆಂಟಿನಿಂದ ಆಯತಪ್ಪಿ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.

ರಾಜಶ್ರೀ ಆಯತಪ್ಪಿ ನೆಲಕ್ಕೆ ಬಿದ್ದಿರುವ ದೃಶ್ಯವು ಹೋಟೆಲ್ ಸಮೀಪದಲ್ಲಿರುವ ಪೈಂಟ್ ಅಂಗಡಿಯೊಂದರ ಸೀಸಿಟೀವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ನಗರ ಪೊಲೀಸರು ಬಂದು ತನಿಖೆ ನಡೆಸಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.