ತಂಡದಿಂದ ಮ್ಯಾನೇಜರ್, ವಾಚ್ಮನ್ ಮೇಲೆ ಹಲ್ಲೆ

ಹೋಟೆಲ್ ಶೌಚಾಲಯ ಉಪಯೋಗಿಸಲು ವಿರೋಧ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಆರು ಮಂದಿ ಯುವಕರ ತಂಡವೊಂದು ಹೋಟೆಲಿನೊಳಗೆ ನುಗ್ಗಿ ದಾಂದಲೆ ಮಾಡಿದ ಘಟನೆ ಗುರುವಾರ ರಾತ್ರಿ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿ ನಡೆದಿದೆ. ಆರು ಮಂದಿಯಲ್ಲಿ ಒಬ್ಬನನ್ನು ಸೆರೆ ಹಿಡಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಬಸ್ ನಿಲ್ದಾಣದ ಮುಂಭಾಗದಲ್ಲಿ ರೆಸ್ಟೋರಾಂಟುವೊಂದಿದ್ದು, ಇಲ್ಲಿ ಅಕ್ಕಪಕ್ಕದಲ್ಲಿ ಎಲ್ಲೂ ಕೂಡಾ ಸರಿಯಾದ ಶೌಚಾಲಯಗಳು ಇಲ್ಲದ ಕಾರಣ ಸಾರ್ವಜನಿಕರು ಇಲ್ಲಿನ ಹೋಟೆಲನ್ನು ಅರಸಿಕೊಂಡು ಬರುತ್ತಾರೆ. ಅದೇ ರೀತಿ ಸಂಜೆ ಆರು ಮಂದಿ ಯುವಕರ ತಂಡವೊಂದು ಆಗಮಿಸಿದ್ದು, ಮೂತ್ರ ವಿಸರ್ಜನೆಗೆಂದು ಹೋಟೆನೊಳಕ್ಕೆ ನುಗ್ಗಿದ್ದಾರೆ. ಆದರೆ ಇಲ್ಲಿ ಹೋಟೆಲಿಗೆ ಬರುವ ಗಿರಾಕಿಗಳಿಗೆ ಮಾತ್ರ ಶೌಚಾಲಯವನ್ನು ನೀಡಲಾಗುತ್ತಿದೆ. ಇದು ಸಾರ್ವಜನಿಕ ಶೌಚಾಲಯ ಅಲ್ಲ ಎಂದು ಹೋಟೆಲ್ ಮ್ಯಾನೇಜರ್ ಹೇಳಿದ್ದಾರೆ. ಆದರೆ ಇದನ್ನು ಕಿವಿಗೆ ಹಾಕಿಕೊಳ್ಳದ ಯುವಕರ ತಂಡ ಬಲಾತ್ಕಾರವಾಗಿ ಒಳನುಗ್ಗಿದೆ. ಕೂಡಲೇ ಅಲ್ಲಿದ್ದ ವಾಚ್ಮನ್ ಇವರನ್ನು ತಡೆಯಲು ಯತ್ನಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಯುವಕರು ವಾಚ್ಮನ್ ಮತ್ತು ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಕಾವಲುಗಾರ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.  ಬಳಿಕ ಆರು ಮಂದಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಆಗಮಿಸಿದ ಸಾರ್ವಜನಿಕರು ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಉರ್ವಾ ಪೊಲೀಸರು ವಿಚಾರಣೆ ನಡೆಸಿದ್ದಾರೆ.