`ಹೊಟೇಲು ಮ್ಯಾನೇಜ್ಮೆಂಟ್ ಸಿಲೆಬಸ್ 15 ವರ್ಷಗಳಿಂದ ಬದಲಾವಣೆ ಆಗಿಲ್ಲ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯವು ಕಳೆದ 15 ವರ್ಷಗಳಿಂದ ಹೊಟೇಲ್ ಮ್ಯಾನೇಜ್ಮೆಂಟ್ ಪಠ್ಯಗಳನ್ನು ಬದಲಾಯಿಸಿಯೇ ಇಲ್ಲ, ವಿದ್ಯಾರ್ಥಿಗಳು ಈಗಲೂ ಕೆಲವು ಅವಧಿ ಮೀರಿದ ವಿಷಯಗಳನ್ನು ಅಭ್ಯಸಿಸುತ್ತಿದ್ದಾರೆ ಎಂದು ಮೋತಿ ಮಹಲ್ ಹೊಟೇಲ್ ಮ್ಯಾನೇಜ್ಮೆಂಟ್ ಕಾಲೇಜಿನ ಪಾಂಶುಪಾಲರು ಹೇಳಿದ್ದಾರೆ.

ಅವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯವು ಮಂಗಳಗಂಗೋತ್ರಿಯಲ್ಲಿ ಆಯೋಜಿಸಿದ್ದ `ಸಂಯೋಜಿತ ಕಾಲೇಜುಗಳಲ್ಲಿ ಶಿಕ್ಷಣ ವ್ಯವಸ್ಥೆ ಕಳಕಳಿ ಹಾಗೂ ಪರಿಣಾಮ” ವಿಚಾರವಾಗಿ ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರಿಗಾಗಿ ನಡೆದ ಒಂದು ದಿನದ ಸಮ್ಮೇಳನದಲ್ಲಿ ಮಾತನಾಡುತ್ತಾ, “ಹೊಟೇಲ್ ಮ್ಯಾನೇಜ್ಮೆಂಟ್ ಪಠ್ಯವಿಷಯಗಳನ್ನು ಆಧುನಿಕ ಅಗತ್ಯಗಳಿಗೆ ಅನುಸಾರವಾಗಿ ವಿಶ್ವವಿದ್ಯಾನಿಲಯವು ಪರಿಷ್ಕರಿಸಬೇಕು, ಇಲ್ಲವಾದರೆ ವಿದ್ಯಾರ್ಥಿಗಳು ಉದ್ಯೋಗ ಸಾಮಥ್ರ್ಯ ಪರೀಕ್ಷೆ ಎದುರಿಸುವ ಸಂದರ್ಭ ಹಿಂಜರಿಯುವ ಪ್ರಮೇಯ ಎದುರಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್‍ಲಾಲ್ ಮೀಣ ಮತ್ತು ಯುಜಿಸಿ ಹೆಚ್ಚುವರಿ ಕಾರ್ಯದರ್ಶಿ ಡಾ ಪಿ ಪ್ರಕಾಶ್ ಭಾಗವಹಿಸಿದ್ದರು.  ಇದೇ ಸಂದರ್ಭ ವಿಶ್ಯವಿದ್ಯಾನಿಲಯ ಅವಧಿ ಮೀರಿದ ಪಠ್ಯವಿಷಯಗಳನ್ನು ಪರಿಶೀಲನೆ ನಡೆಸುವಂತೆ ಭರತಲಾಲ್ ಮೀಣ ವಿಶ್ವವಿದ್ಯಾನಿಲಯಕ್ಕೆ ಸೂಚಿಸಿದರು. “10ನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಅವರಿಗೆ ಪೂರಕ ಪರೀಕ್ಷೆಗಳನ್ನು ನಡೆಸಿ, ಈ ಮೂಲಕ ಅವರು ಪಾಸಾದರೆ ಒಂದು ವರ್ಷ ಹಾಳು ಮಾಡದೆ ವಿದ್ಯಾಭ್ಯಾಸ ಮುಂದುವರಿಸುವ ಅವಕಾಶವಿದೆ. ಆದರೆ ವಿಶ್ವವಿದ್ಯಾನಿಲಯಗಳಲ್ಲಿ ಅಂತಹ ಸೌಲಭ್ಯವಿಲ್ಲ. ವಿದ್ಯಾರ್ಥಿ ಅನುತ್ತೀರ್ಣರಾದರೆ ಪೂರಕ ಪರೀಕ್ಷೆಗೆ ಒಂದು ವರ್ಷ ಕಾಯಬೇಕು” ಎಂದು ಉಪನ್ಯಾಸಕಿಯೊಬ್ಬರು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಒಂದು ನಿರ್ಧಾರ ಕೈಗೊಳ್ಳುವಂತೆ ಭರತಲಾಲ್ ವಿಶ್ವವಿದ್ಯಾನಿಲಯಕ್ಕೆ ಸೂಚಿಸಿದ್ದಾರೆ.

ನೀರಿನ ಕೊರತೆ

ನಗರದಲ್ಲಿ 2016ರ ಬೇಸಿಗೆಯಲ್ಲಿ ಎದುರಾದ ನೀರಿನ ಕೊರತೆ ಬಗ್ಗೆ ಗಮನ ಸೆಳೆದ ಪ್ರಾಂಶುಪಾಲರೊಬ್ಬರು 2016-17 ರ ಶೈಕ್ಷಣಿಕ ವೇಳಾಪಟ್ಟಿಯನ್ನು ಮಾರ್ಚ್ ಅಂತ್ಯಕ್ಕೆ ಕೊನೆಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ. ಈ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಮೀಣ ಭರವಸೆ ನೀಡಿದ್ದಾರೆ.