ಆಕಸ್ಮಿಕ ಬೆಂಕಿಗೆ ಹೋಟೆಲ್ ಭಸ್ಮ

ಬೆಂಕಿಗಾಹುತಿಯಾದ ಹೋಟೆಲ್ ಉದಯಗಿರಿ

ಪೊಲೀಸ್ ತನಿಖೆ ಆರಂಭ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಹಳೆ ಕಾಲದ ಹೋಟೆಲ್ ರಾತ್ರಿ ವೇಳೆ ದಿಢೀರ್ ಹೊತ್ತಿ ಉರಿದು ಭಸ್ಮವಾಗಿದ್ದು, ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಎಂದು ಹೇಳಲಾಗುತ್ತಿದ್ದರೂ ಬೆಂಕಿಯ ಕಾರಣಕ್ಕೆ ಹೋಟೆಲಿನ ಒಂದು ಭಾಗ ಸಂಪೂರ್ಣ ಭಸ್ಮವಾಗಿದ್ದು, ಅಡುಗೆ ಕೋಣೆಗೆ ಬೆಂಕಿ ತಗುಲದೇ ಇರುವುದು ಸಂಶಯವನ್ನು ಹುಟ್ಟು ಹಾಕಿದೆ.

ಆರ್ಯಾಪು ಗ್ರಾಮದ ಸಂಪ್ಯಮೂಲೆ ನಿವಾಸಿ ಶಾಂತಪ್ಪ ಗೌಡರಿಗೆ ಸೇರಿದ ಮಾಣಿ ಮೈಸೂರು ಹೆದ್ದಾರಿ ಬದಿಯಲ್ಲಿನ ಸಂಪ್ಯ ಎಂಬಲ್ಲಿರುವ `ಹೋಟೆಲ್ ಉದಯಗಿರಿ’ ಬೆಂಕಿಗಾಹುತಿಯಾಗಿದೆ. ಸೋಮವಾರ ರಾತ್ರಿ 3 ಗಂಟೆ ವೇಳೆ ಈ ಹೋಟೆಲ್ ಕಟ್ಟಡ ಉರಿಯಲಾರಂಭಿಸಿದ್ದು, ಅದನ್ನು ಗಮನಿಸಿದ ಸ್ಥಳೀಯರು ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದ್ದರು. ಪುತ್ತೂರು ಅಗ್ನಿಶಾಮಕ ದಳದವರು ಹಾಗೂ ಸಂಪ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದರೂ ಯಾವುದೇ ಪ್ರಯೋಜನವಾಗದೆ. ಹೋಟೆಲ್ ಕಟ್ಟಡ ಸಂಪೂರ್ಣವಾಗಿ ಸುಟ್ಟು ಭಸ್ಮಗೊಂಡಿದೆ.

ಹೋಟೆಲ್ ಇದ್ದ ಈ ಕಟ್ಟಡ ಹಂಚಿನ ಮಾಡಿನದ್ದಾಗಿದ್ದು, ಕಟ್ಟಡದ ಮಾಡು, ಛಾವಣಿ ಮರಮಟ್ಟುಗಳು ಸಂಪೂರ್ಣವಾಗಿ ಸುಟ್ಟು ಭಸ್ಮಗೊಂಡಿದೆ. ಕಟ್ಟಡದೊಳಗಿದ್ದ ಹೋಟೆಲಿಗೆ ಸಂಬಂಸಿದ ಪೀಠೋಪಕರಣಗಳು, ಕಪಾಟು, ಫ್ರಿಡ್ಜ್,ಪಾತ್ರೆಗಳು, ವಿದ್ಯುತ್ ಉಪಕರಣಗಳು ಹಾಗೂ ಇನ್ನಿತರ ಸಾಮಗ್ರಿಗಳು ನಾಶವಾಗಿವೆ. ಈ ಬೆಂಕಿ ಆಕಸ್ಮಿಕದಿಂದಾಗಿ ಒಟ್ಟು ರೂ 5 ಲಕ್ಷದಷ್ಟು ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಘಟನೆಯ ಕುರಿತು ಶಾಂತಪ್ಪ ಗೌಡ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ಸಂಪ್ಯ ಎಸೈ ಅಬ್ದುಲ್ ಖಾದರ್, “ಹಳೆ ಕಾಲದ ಕಟ್ಟಡವಾದ ಕಾರಣ ವಿದ್ಯುತ್ ಅವಘಡ ಸಂಭವಿಸಿರುವ ಸಾಧ್ಯತೆ ಇದೆ. ಕಟ್ಟಡ ಮಾಲಿಕರು ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.