ಹೃದಯನಾಳ ರೋಗಿಗಳ ಸುಲಿಯುವ ಆಸ್ಪತ್ರೆಗಳು

ಹೃದ್ರೋಗಿಗಳಿಗೆ ಅಳವಡಿಸುವ ಸ್ಟೆಂಟಗಳನ್ನು ಮಾರಾಟ ಮಾಡುವ ಮೂಲಕ ಆಸ್ಪತ್ರೆಗಳು ದಂಧೆ ನಡೆಸುತ್ತಿವೆ.

 

  • ಮನು ಬಾಲಚಂದ್ರ

ಭಾರತದಲ್ಲಿ ಪ್ರತಿವರ್ಷ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನರು ಹೃದಯ ನಾಳದ ರೋಗಕ್ಕೆ ತುತ್ತಾಗುತ್ತಿದ್ದು, ಕರೋನರಿ ಹೃದ್ರೋಗ ಮತ್ತು ಪಾಶ್ರ್ವವಾಯು ರೋಗಕ್ಕೆ ಬಲಿಯಾಗಿ ಸಾಯುತ್ತಿದ್ದಾರೆ. ಮೂರು ಕೋಟಿಗೂ ಹೆಚ್ಚು ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಪ್ರತಿವರ್ಷ ಭಾರತದ ಆಸ್ಪತ್ರೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಹೃದಯ ಶಸ್ತ್ರ ಚಿಕಿತ್ಸೆ ನಡೆಯುತ್ತದೆ. ಇತರ ದೇಶಗಳಿಗೆ ಹೋಲಿಸಿದರೆ ಈ ಶಸ್ತ್ರ ಚಿಕಿತ್ಸೆಯ ವೆಚ್ಚ ಅತ್ಯಂತ ಕಡಿಮೆಯಾಗಿದ್ದರೂ ಆಸ್ಪತ್ರೆಗಳು ಮತ್ತು ವೈದ್ಯರು ವಾಮ ಮಾರ್ಗಗಳನ್ನು ಅನುಸರಿಸುವ ಮೂಲಕ ಹಣ ದೋಚುತ್ತಿದ್ದಾರೆ.

ಹೃದ್ರೋಗಿಗಳಿಗೆ ಅಳವಡಿಸುವ ಸ್ಟೆಂಟಗಳನ್ನು ಮಾರಾಟ ಮಾಡುವ ಮೂಲಕ ಆಸ್ಪತ್ರೆಗಳು ದಂಧೆ ನಡೆಸುತ್ತಿವೆ. ರಕ್ತ ಸಂಚಲನೆಯನ್ನು ಸುಗಮಗೊಳಿಸಲು ರಕ್ತನಾಳದಲ್ಲಿ ಅಳವಡಿಸುವ ಸ್ಟೆಂಟಗಳನ್ನು ಆಂಜಿಯೋಪ್ಲಾಸ್ಟ್ರಿ ಮೂಲಕ ಅಳವಡಿಸಲಾಗುತ್ತದೆ. ಭಾರತದ ಆಸ್ಪತ್ರೆಗಳಲ್ಲಿ ಸ್ಟೆಂಟಗಳನ್ನು ಮೂಲ ದರಕ್ಕಿಂತಲೂ ಶೇ 654ರಷ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಔಷಧಿಯ ದರಗಳನ್ನು ನಿಗದಿಪಡಿಸುವ ಸಂಸ್ಥೆ ಎನ್‍ಪಿಪಿಎ ಹೇಳಿದೆ. ಸ್ಟೆಂಟ್‍ಗಳ ದರ 25 ಸಾವಿರದಿಂದ 1 ಲಕ್ಷ 98 ಸಾವಿರ ರೂ ಇರುತ್ತದೆ.

ಭಾರತದಲ್ಲಿ ಸ್ಟೆಂಟ್ ಉದ್ಯಮವನ್ನು ಬಹುಪಾಲು ಬಹುರಾಷ್ಟ್ರೀಯ ಕಂಪನಿಗಳೇ ನಡೆಸುತ್ತಿದ್ದು ಒಟ್ಟು 1400 ಕೋಟಿ ರೂ ವಹಿವಾಟು ನಡೆಯುತ್ತದೆ.  ಅಬ್ಬಾಟ್ ವ್ಯಾಸ್ಕುಲಾರ್ ಮತ್ತು ಮೆಡ್ ಟ್ರಾನಿಕ್ ಕಂಪನಿಗಳು ಒಟ್ಟು ಶೇ 60ರಷ್ಟು ಮಾರುಕಟ್ಟೆ ಪಾಲು ಹೊಂದಿವೆ. ಸ್ಥಳೀಯವಾಗಿ ಉತ್ಪಾದಿಸಲಾಗುವ ಸ್ಟೆಂಟ್ ಭಾರತದ ಆಸ್ಪತ್ರೆಗಳು ಶೇ 74 ರಿಂದ ಶೇ 435ರಷ್ಟು ಲಾಭಕ್ಕೆ ಮಾರಾಟ ಮಾಡುತ್ತಿವೆ ಎಂದು ಎನ್‍ಪಿಪಿಎ ಹೇಳುತ್ತದೆ. ಅಮದು ಮಾಡಿಕೊಂಡ ಸ್ಟೆಂಟಗಳನ್ನು ಶೇ 654ರಷ್ಟು ಲಾಭಕ್ಕೆ ಮಾರಾಟ ಮಾಡುತ್ತಿವೆ.  ಸ್ಥಳೀಯ ಸ್ಟೆಂಟಗಳ ಉತ್ಪಾದನಾ ವೆಚ್ಚ ತಲಾ ರೂ 7600ರಿಂದ ರೂ 8250ರಷ್ಟಾಗುತ್ತದೆ.  ಆಮದು ಮಾಡಿಕೊಂಡ ಸ್ಟೆಂಟಗಳ ಬೆಲೆ ರೂ 5126 ರಿಂದ 40820 ರೂಗಳಷ್ಟಾಗುತ್ತದೆ. ಈ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ವಿತರಕನ ಲಾಭಾಂಶ ಶೇ 87ರಿಂದ ಶೇ 1026ರಷ್ಟಿರುತ್ತದೆ. ಕಳೆದ ಹಲವು ವರ್ಷಗಳಲ್ಲಿ ದೇಶದಲ್ಲಿ ಹೃದಯ ಶಸ್ತ್ರ ಚಿಕಿತ್ಸೆಯ ಸಂಖ್ಯೆಯೂ ಹೆಚ್ಚಾಗುತ್ತಿದ್ದು ಸ್ಟೆಂಟ್ ಬೆಲೆಗಳನ್ನು ಕಡಿಮೆ ಮಾಡಲು ಜನರ ಆಗ್ರಹ ತೀವ್ರವಾಗುತ್ತಿದೆ. 2011ರ ನಂತರ ಭಾರತದಲ್ಲಿ ಸ್ಟೆಂಟ್ ಅಳವಡಿಸುವ ಚಿಕಿತ್ಸೆಯ ಸಂಖ್ಯೆ ಐದು ಲಕ್ಷದಷ್ಟಾಗಿದೆ.

ಏತನ್ಮಧ್ಯೆ, ಕಳೆದ ನವಂಬರಿನಲ್ಲಿ ನರೇಂದ್ರ ಮೋದಿ ಸರ್ಕಾರ ಡಿಇಎಸ್ ಸ್ಟೆಂಟ್ ಮತ್ತು ಬೇರ್ ಮೆಟಲ್ ಸ್ಟೆಂಟಗಳನ್ನು ಅತ್ಯವಶ್ಯಕ ವಸ್ತುಗಳ ಪಟ್ಟಿಗೆ ಸೇರಿಸಿದೆ. ಈ ಪಟ್ಟಿಯಲ್ಲಿರುವ ಔಷಧಿಗಳನ್ನು ಜನರ ಕೈಗೆಟುಕುವ ಬೆಲೆಗೆ ಪೂರೈಸುವುದು ಕಡ್ಡಾಯವಾಗಿರುತ್ತದೆ. ಶೇ 66ರಷ್ಟು ಜನರು ದಿನಕ್ಕೆ 2 ಡಾಲರಿಗಿಂತಲೂ ಕಡಿಮೆ ಆದಾಯದಲ್ಲಿ ಜೀವನ ನಡೆಸುವ ದೇಶದಲ್ಲಿ ಆರೋಗ್ಯದ ವೆಚ್ಚ ಸದಾ ದುಬಾರಿಯಾಗಿಯೇ ಇರುತ್ತದೆ.

ರಾಷ್ಟ್ರೀಯ ಅರೋಗ್ಯ ನೀತಿಯ ಪ್ರಕಾರ ಭಾರತೀಯ ಪ್ರಜೆಗಳ ಆರೋಗ್ಯ ವೆಚ್ಚ ಆದಾಯದ ಶೇ 60ರಷ್ಟಿದೆ. ಸ್ಟೆಂಟ್ ಬೆಲೆಯನ್ನು ಹೊರತುಪಡಿಸಿದರೂ ಭಾರತದ ಆಸ್ಪತ್ರೆಗಳಲ್ಲಿ ಹೃದಯ ಶಸ್ತ್ರ ಚಿಕಿತ್ಸೆಯ ವೆಚ್ಚ ಕನಿಷ್ಠ 60 ಸಾವಿರದಿಂದ ಎರಡೂವರೆ ಲಕ್ಷ ರೂಪಾಯಿಗಳಷ್ಟಾಗುತ್ತದೆ.  ಈ ಹಿನ್ನೆಲೆಯಲ್ಲಿ ಸ್ಟೆಂಟ್ ಬೆಲೆಗಳನ್ನು ಗರಿಷ್ಟ ಮಟ್ಟದಲ್ಲಿ 21,881 ರೂಪಾಯಿಯಿಂದ 67272 ರೂ ಒಳಗೆ ನಿಗದಿಪಡಿಸಲು ಎನ್‍ಪಿಪಿಎ ನಿರ್ಧರಿಸಿದೆ. ವಿಪರ್ಯಾಸವೆಂದರೆ, ಅನೇಕ ವೈದ್ಯರು ಈ ತೀರ್ಮಾನವನ್ನು ವಿರೋಧಿಸುತ್ತಿದ್ದಾರೆ. ಸ್ಟೆಂಟ್ ಉತ್ಪಾದಕರು ವಿತರಕರಿಗೆ ಶೇ 34ರಷ್ಟು ರಿಯಾಯಿತಿ ನೀಡಿದ್ದರೂ ಅದು ಗ್ರಾಹಕರಿಗೆ ತಲುಪುತ್ತಿಲ್ಲ ಎನ್ನುವುದು ದುರಂತ.