ಆಸ್ಪತ್ರೆಗೆ ದಾಖಲಾದವರನ್ನು ಬಲವಂತದಿಂದ ಬಿಡಗಡೆಗೊಳಿಸಲೆತ್ನಿಸಿದ ಬಿಜೆಪಿ ಮುಖಂಡರು

ಹೊಸಬೆಟ್ಟು ಚುನಾವಣೋತ್ತರ ಘರ್ಷಣೆ ವಿವಾದ

ಕಾಂಗ್ರೆಸ್ ಆರೋಪ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಇತ್ತೀಚಿಗೆ ಹೊಸಬೆಟ್ಟು ಸಮೀಪದ ಮಾಸ್ತಿಕಟ್ಟೆಯಲ್ಲಿ ನಡೆದ ವಿಜಯೋತ್ಸವ ವೇಳೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಮುಖಂಡರು ಬಲವಂತದಿಂದ ಬಿಡುಗಡೆಗೊಳಿಸಲು ಯತ್ನಿಸಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು. “ಇತ್ತೀಚೆಗೆ ಕಾಂಗ್ರೆಸ್ ವಿಜಯೋತ್ಸವದ ವೇಳೆ ಬಿಜೆಪಿಗರಿಂದ ಹಲ್ಲೆಗೊಳಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಕೃಷ್ಣ ಮತ್ತು ಸತೀಶ್ ಮಡಿವಾಳರಲ್ಲಿಗೆ ಬಿಜೆಪಿಯ ಜಗದೀಶ್ ಅಧಿಕಾರಿ, ಉಮನಾಥ ಕೋಟ್ಯಾನ್, ಈಶ್ವರ ಕಟೀಲು, ಸುಚರಿತ ಶೆಟ್ಟಿ, ಜೋಯ್ಲಸ್ ಮತ್ತಿತರರು ತೆರಳಿ “ನಿಮಗೇನು ಆಗಲಿಲ್ಲ, ಹೊರಹೋಗಿ” ಎಂದು ಬಲವಂತಪಡಿಸಿದಲ್ಲದೆ ಕೊಲೆಬೆದರಿಕೆಯೊಡ್ಡಿ ಬಿಡುಗಡೆಗೆ ಪ್ರಯತ್ನಿಸಿದ್ದರು. ಇದಕ್ಕೆ ನಾವು ಆಕ್ಷೇಪಿಸಿದ್ದೆವು. ನಂತರ ಪೊಲೀಸರು ಸ್ಥಳಕ್ಕಾಗಮಿಸಿದಾಗ ಅಲ್ಲಿದ್ದ ಬಿಜೆಪಿ ಮುಖಡರು ಹೊರಹೋದರು. ಈ ದೃಶ್ಯ ಆಸ್ಪತ್ರೆಯ ಸೀಸಿ ಕ್ಯಾಮರಾದಲ್ಲಿ ದಾಖಲಾಗಿದೆ” ಎಂದರು.

“ಕಾಂಗ್ರೆಸ್ಸಿನ ಚಂದ್ರಹಾಸ್ ಸನಿಲ್ ವಿರುದ್ಧ ಈ ಹಿಂದೆ ಪೆÇಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ಇಲ್ಲ. ಆದರು ಅವರನ್ನು ಗೂಂಡಾ ಎಂದು ಆರೋಪಿಸಿರುವ ಬಿಜೆಪಿ ಮುಖಂಡರೊಬ್ಬರ ಮೇಲೆ ಬಜಪೆ ಪೆÇಲೀಸ್ ಠಾಣೆಯಲ್ಲಿ ದಾಖಲಾದ ಕ್ರಿಮಿನಲ್ ಕೇಸು ಅವರ ಗೂಂಡಾ ನಡವಳಿಕೆಗೆ ಸಾಕ್ಷಿ. ಶಾಸಕ ಅಭಯಚಂದ್ರ, ಎಪಿಎಂಸಿ ಸದಸ್ಯ ಚಂದ್ರಹಾಸ್ ಸನಿಲರನ್ನು ಗೂಂಡಾ ಎಂದು ಕರೆದ ಬಿಜೆಪಿಗರು ತಮ್ಮ ಶರ್ಟ್ ಬಿಚ್ಚಿ ಬೆನ್ನು ನೋಡಿದರೆ ಯಾರು ಗೂಂಡಾಗಳೆಂದು ಗೊತ್ತಾಗುತ್ತದೆ” ಎಂದು ಟೀಕಿಸಿದರು.

“ಚಂದ್ರಹಾಸ್ ಸನಿಲರ ಕಟುಂಬಕ್ಕೆ ಸೇರಿದ ಹೊಸಬೆಟ್ಟುವಿನಲ್ಲಿರುವ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ವಿಜಯೋತ್ಸವ ಆಚರಿಸುತ್ತಿದ್ದಾಗ ಬಿಜೆಪಿಯ ವಲೇರಿಯನ್ ಕುಟಿನ್ಹಾ ಅಲ್ಲಿಗೆ ಬಂದು ಉದ್ದೇಶಪೂರಕವಾಗಿ ಜಗಳಕ್ಕಿಳಿದು ವಿವಾದ ಸೃಷ್ಟಿಸಿದ್ದರು. ಮೂಡುಬಿದಿರೆಯ ಹನುಮಂತ ದೇವಸ್ಥಾನಕ್ಕೆ ಇದುವರೆಗೆ ಹೋಗದ ಕೆಲ ಬಿಜೆಪಿಗರು ಮೊನ್ನೆ ಭೇಟಿ ನೀಡಿ ಸೀಯಾಳಾಭಿಷೇಕ ಮಾಡಿದ್ದಾರೆ. ಹೊಸಬೆಟ್ಟು ಘಟನೆಯ ಸತ್ಯಾಂಶ ಹೊರಬರಲು ನಾವು ಕೂಡ ಪ್ರಕರಣವನ್ನು ಹನಮಂತನ ಸನ್ನಿಧಿಗೆ ಬಿಟ್ಟಿದ್ದೇವೆ” ಎಂದು ಸುರೇಶ್ ಕೋಟ್ಯಾನ್ ಹೇಳಿದರು.