ತೆಂಗಿನ ಕಪ್ಪುತಲೆ ಹುಳ ನಿಯಂತ್ರಣಕ್ಕೆ ಮುಂದಾಗದ ತೋಟಗಾರಿಕಾ ಇಲಾಖೆ

ಮರ ಸುಟ್ಟು ಹೋದ ಮೇಲೆ ಎಚ್ಚೆತ್ತುಕೊಂಡು ಕಾರ್ಯಾಗಾರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕರಾವಳಿಯಲ್ಲಿ ವ್ಯಾಪಕವಾಗಿ ಬಾಧಿಸಿರುವ ತೆಂಗಿನ ಮರಗಳ ಕಪ್ಪು ತಲೆ ಹುಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದ ತೋಟಗಾರಿಕಾ ಇಲಾಖೆ ಇದೀಗ ಎಚ್ಚೆತ್ತುಕೊಂಡು ಕಾರ್ಯಾಗಾರವನ್ನು ಪ್ರಾರಂಭಿಸಿದೆ. ಈ ಮೂಲಕ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಜಪ್ಪಿನಮೊಗರು, ನೇತ್ರಾವತಿ ಪರಿಸರ, ಅಡ್ಯಾರ್, ಉಳ್ಳಾಲ, ತೊಕ್ಕೊಟ್ಟು ಹೀಗೆ ವ್ಯಾಪಕವಾಗಿ ತೆಂಗಿನ ಮರಗಳಿಗೆ ತಗಲಿರುವ ಕಪ್ಪು ತಲೆ ಹುಳ ಬಾಧೆ ನಿಯಂತ್ರಿಸಲು ಫೆಬ್ರವರಿ ತಿಂಗಳಿನಲ್ಲಿ ಪರೋಪಜೀವಿ ಹುಳಗಳನ್ನು ಬಿಟ್ಟ ತೆಂಗು ಬೆಳೆಗಾರರನ್ನು ಸಮಾಧಾನ ಪಡಿಸಿದ್ದ ತೋಟಗಾರಿಕಾ ಇಲಾಖೆ ಇದೀಗ ಎಚ್ಚೆತ್ತುಕೊಂಡಿದೆ. ಶೇ 90ರಷ್ಟು ಮರಗಳು ಸಂಪೂರ್ಣ ಸುಟ್ಟು ಹೋದ ಬಳಿಕ ರೋಗ ನಿಯಂತ್ರಣದ ಬಗ್ಗೆ ತೊಕ್ಕೊಟ್ಟಿನಲ್ಲಿ ಕಾರ್ಯಾಗಾರ ನಡೆಸಿದೆ.

ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

“ತೋಟಗಾರಿಕೆ ಇಲಾಖೆ ಸರಕಾರದ ಸೀಮಿತ ಸುತ್ತೋಲೆಯ ಪ್ರಕಾರ ಕಾರ್ಯಾಚರಿಸುತ್ತಿದೆ ಹೊರತು ತೆಂಗು ಬೆಳೆಗಾರರ ಸಮಸ್ಯೆ ನಿವಾರಿಸುವ ಆಸಕ್ತಿ ತೋರಿಸುತ್ತಿಲ್ಲ. ತೋಟಗಾರಿಕಾ ಇಲಾಖೆ ವಿಜ್ಞಾನಿಗಳು ಕಳೆದ ಬಾರಿ ಕಪ್ಪು ತಲೆಯ ಹುಳುಗಳನ್ನು ಕೊಲ್ಲಲು ಪರೋಪಜೀವಿಗಳನ್ನು ಬಿಟ್ಟಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಮಳೆ ಬಂದರೆ ಹತೋಟಿಗೆ ಬರುವುದು ಎಂದು ವಿಜ್ಞಾನಿಗಳು ಸಮಾಧಾನ ಪಡಿಸುತ್ತಿರುವುದು ಬಿಟ್ಟರೆ ವಿಜ್ಞಾನಿಗಳಿಂದ ಈ ಬಗ್ಗೆ ಯಾವುದೇ ಸಂಶೋಧನೆ ಆಗಿಲ್ಲ ಎಂದು ಅವರು ದೂರಿದ್ದರು.