ಹೊನ್ನಾವರ ಉದ್ವಿಗ್ನ

ಲ್ಲಕ ಕಾರಣಕ್ಕೆ ಕಲ್ಲು, ಬಾಟಲಿ ತೂರಾಟ

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಟೇಂಪೋ-ರಿಕ್ಷಾ ಸ್ಟ್ಯಾಂಡ್ ಬಳಿ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳವು ಒಮ್ಮೇಲೆ ಕಲ್ಲು, ಬಾಟಲಿ ತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

ಕಮಟೇಹಿತ್ಲದ ನರಸಿಂಹ ಮೇಸ್ತ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶರತ್ ಮಹಾಲೆ ಎಂಬವರು ತಮ್ಮ ಹೇರ್ ಕಟಿಂಗ್ ಶಾಪ್ ಬಂದ್ ಮಾಡಿ ಅದೇ ಮಾರ್ಗದಲ್ಲಿ ನಡೆದು ಹೋಗುತ್ತಿರುವಾಗ ಅವರಿಗೆ ಪೆಟ್ಟು ಬಿದ್ದು ಪಟ್ಟಣದ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬ ಪೊಲೀಸ್ ಪೇದೆಗೆ ಕೈಬೆರಳಿಗೆ ಗಾಯವಾಗಿದೆ. ಟೆಂಪೋ ಸ್ಟ್ಯಾಂಡಿನಲ್ಲಿ ನಿಲ್ಲಿಸಿದ್ದ 10 ಟೆಂಪೋಗಳ ಗಾಜುಗಳನ್ನು ಪುಡಿ ಮಾಡಲಾಗಿದೆ. ಕೆಲವು ಟೆಂಪೋಗಳು ಜಖಂಗೊಂಡಿವೆ.

ಬಸ್ ನಿಲ್ದಾಣದ ಸುತ್ತಮುತ್ತ ಇರುವ ಅಂಗಡಿಗಳ ಜನರು ಅಂಗಡಿಗಳನ್ನು ಬಂದ್ ಮಾಡಿ ಮನೆಗೆ ತೆರಳುವ ಸಮಯದಲ್ಲಿ ಒಂದು ಕೋಮಿಗೆ ಸಂಬಂಧ ಪಟ್ಟ ಒಂದಿಷ್ಟು ಜನರ ಗುಂಪು ಹೋ ಎಂದು ಕೂಗುತ್ತ ಕಲ್ಲು, ಬಾಟಲಿ ತೂರಾಟ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹಾಗೂ ಗುರುವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿನ ಎಸೈ ಹಾಗೂ ಪೊಲೀಸ್ ಸಿಬ್ಬಂದಿ ಭದ್ರತೆಗೆ ತೆರಳಿದ್ದರು. ಒಮ್ಮಿಂದೊಮ್ಮಲೆ ಗಲಾಟೆ ಆಗಿರುವುದರಿಂದ ಇದ್ದ ಕೆಲವೇ ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸಪಟ್ಟರು.

ಈ ಸ್ಥಳದಲ್ಲಿ ಶ್ರೀ ಶನೈಶ್ಚರ ದೇವಸ್ಥಾನವಿದ್ದು, ಅದರ ಸನಿಹದಲ್ಲೇ ಇರುವ ಸ್ಥಳದಲ್ಲಿ ಈದ್ ಮಿಲಾದ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕಳೆದ ಶನಿವಾರ ನಡೆದ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಈದ್ ಮಿಲಾದ್ ಕಾರ್ಯಕ್ರಮಗಳನ್ನು ಹಾಗೂ ಪಕ್ಕದಲ್ಲಿಯೇ ಇರುವ ಶನೈಶ್ಚರ ದೇವರ ಶನಿವಾರದ ವಿಶೇಷ ಪೂಜೆಗಳನ್ನು ಪೊಲೀಸ್ ಬಿಗಿಬಂದೋಬಸ್ತಿನಲ್ಲಿ ನಡೆಸಲಾಗಿತ್ತು.

ರಾತ್ರಿ 12 ಗಂಟೆವರೆಗೆ ಟೆಂಪೋ ಚಾಲಕರು, ಮಾಲಿಕರು ಸ್ಥಳಕ್ಕೆ ಬಂದು ತಮ್ಮ ಟೆಂಪೋಗಳಿಗೆ ಹಾನಿಯಾಗಿರುವುದನ್ನು ಗಮನಿಸಿ ಪೊಲೀಸ್ ಠಾಣೆಗೆ ತೆರಳಿ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಘಟನಾ ಸ್ಥಳದಲ್ಲಿ ಹಾಗೂ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಕಲ್ಲು, ಗಾಜಿನ ಬಾಟಲಿಗಳು, ಕಬ್ಬಿಣದ ರಾಡು ಬಿದ್ದುಕೊಂಡಿವೆ. ಪಟ್ಟಣದ ಜನರಲ್ಲಿ ಈ ಘಟನೆ ಭಯದ ವಾತಾವರಣವನ್ನು ಸೃಷ್ಟಿಸಿದೆ.