ಜಿಎಸ್ಟಿ ದರಕ್ಕೆ ಹೋಂಸ್ಟೇ ಮಾಲಿಕರ ಅಸಮಾಧಾನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಹೋಂಸ್ಟೇಗಳಿಗೆ ಹೇರಲಾಗಿರುವ ಜಿಎಸ್ಟಿ ದರ ಇಳಿಕೆಗೆ ಸತತ ಮನವಿ ಮಾಡುತ್ತಿದ್ದರೂ ಸರಕು ಮತ್ತು ಸೇವಾ ತೆರಿಗೆ ಸಮಿತಿ ಯಾವುದೇ ರೀತಿಯ ಪ್ರತಿಸ್ಪಂದನೆ ನೀಡದಿರುವುದರಿಂದ ಕರಾವಳಿ ಮತ್ತು ಮಲೆನಾಡು ಪ್ರಾಂತ್ಯಗಳ ಹೋಂಸ್ಟೇ ಮಾಲಿಕರು ಚಿಂತಾಕ್ರಾಂತರಾಗಿದ್ದಾರೆ. ಪ್ರಸಕ್ತ ಹೋಂಸ್ಟೇಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ, ಇದರೊಂದಿಗೆ 18 ಶೇಕಡಾ ಜಿಎಸ್ಟಿ ಮತ್ತಷ್ಟು ದೊಡ್ಡ ಸಮಸ್ಯೆಯಾಗಿ ಕಾಡಲಿದೆ ಎಂದು ಅವರು ಭೀತಿ ವ್ಯಕ್ತಪಡಿಸಿದ್ದಾರೆ.

ಹೋಂಸ್ಟೇ ಮಾಲಿಕರು ಜಿಎಸ್ಟಿ ದರವನ್ನು 3-5 ಶೇಕಡಾಕ್ಕೆ ಇಳಿಸುವಂತೆ ಒತ್ತಾಯಿಸಿ ಹಲವು ಬಾರಿ ಸಮಿತಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಸಮಿತಿಯಿಂದ ವ್ಯಕ್ತವಾಗಿಲ್ಲ ಎಂದು ಹೋಂಸ್ಟೇ ಮಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

“ಹೆಚ್ಚಿನ ಹೋಂಸ್ಟೇ ಮಾಲಿಕರು ಅತ್ಯಂತ ಕಷ್ಟದಿಂದ ಹೋಂಸ್ಟೇಗಳನ್ನು ತೆರೆದಿದ್ದಾರೆ. ಹಲವು ಮಂದಿ ಕೃಷಿಯೊಂದಿಗೆ ಹೆಚ್ಚುವರಿ ಆದಾಯ ಗಳಿಸುವ ಆಶಯದಿಂದ ಹೋಂಸ್ಟೇಗಳನ್ನು ತೆರೆದಿದ್ದಾರೆ. ಸರ್ಕಾರದ ಜಿಎಸ್ಟಿ ಹೇರಿಕೆ ನನ್ನಂತಹ ಸಾಮಾನ್ಯ ರೈತರಿಗೆ ಹೆಚ್ಚುವರಿ ಹೊರೆಯಾಗುತ್ತದೆ. ಗ್ರಾಹಕರಿಗೆ ಗುಣಮಟ್ಟದ ಆಹಾರ, ಗುಣಮಟ್ಟದ ಸೇವೆ ಒದಗಿಸುವುದು ಹೋಂಸ್ಟೇ ಮಾಲೀಕರ ಕರ್ತವ್ಯವಾಗಿದೆ. ಈ ನಡುವೆ ಜಿಎಸ್ಟಿ ದರ ವಿಧಿಸಿದರೆ ಮಾಲಿಕರಿಗೆ ಲಾಭಾಂಶವೇ ಇಲ್ಲದಾಗುತ್ತದೆ. ನನ್ನಂತಹ ಹೋಂಸ್ಟೇ ಮಾಲಿಕರು ಹೋಂಸ್ಟೇಯನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಗುವುದು ನಿಶ್ಚಿತ” ಎಂದು ಚಿಕ್ಕಮಗಳೂರು ಹೋಂಸ್ಟೇ ಮಾಲಿಕ ಸುರೇಶ್ ಮಥಾಯಿಸ್ ಹೇಳಿದ್ದಾರೆ.