ಮನೆರಹಿತರ ಜಾಗ ಬೇಡಿಕೆ

ಸಾಂದರ್ಭಿಕ ಚಿತ್ರ

 ಉಡುಪಿ : ಮನೆರಹಿತರಿಗೆ ತಕ್ಷಣ ಸೈಟ್ ನೀಡಲು ಒತ್ತಾಯಿಸಿ ಉಡುಪಿ ಜಿಲ್ಲಾ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ಪ್ರತಿಭಟನೆ ನಡೆಸಿ ಉಡುಪಿ ನಗರಸಭೆಗೆ ಮುತ್ತಿಗೆ ಹಾಕಿದರು. ಪ್ರತಿಭಟನಾಕಾರರು ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸುವಂತೆ ಘೋಷಣೆಗಳನ್ನು ಕೂಗುತ್ತಾ ಬನ್ನಂಜೆಯಿಂದ ನಗರಸಭೆ ಸಮಿತಿ ಕಚೇರಿವರೆಗೆ ಜಾಥಾ ನಡೆಸಿದರು.

ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್, “ನಗರಸಭೆ ಆಯುಕ್ತರು ಶಿವಳ್ಳಿ -76- ಬಡಗಬೆಟ್ಟು, ಪುತ್ತೂರು ಮತ್ತು ಹೆರ್ಗದಲ್ಲಿ ಜಾಗ ಗುರುತಿಸಿರುವುದಾಗಿ ಲಿಖಿತ ಭರವಸೆ ನೀಡಿದ್ದರೂ ನಗರಸಭೆ ಮುಂದುವರಿಯಲು ವಿಫಲವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಮನೆಯಿಲ್ಲದವರಿಗೆ ಅಪಾರ್ಟುಮೆಂಟ್ ನೀಡುವುದಾಗಿ ನಗರಸಭೆ ಆಯುಕ್ತರು ಭರವಸೆ ನೀಡಿದ್ದಾರೆ. ಆದರೆ ಭರವಸೆಗಳು ಮಾತ್ರ ಕೇವಲ ಬಾಯಿಮಾತಿಗೆ ಮೀಸಲಾಗಿದೆ” ಎಂದು ಅವರು ಟೀಕಿಸಿದರು.

“ಜಿಲ್ಲಾ ಅಭಿವೃದ್ಧಿ ಪರಿಶೀಲನಾ ಸಮಿತಿಯು ಮೊದಲ ಹಂತದಲ್ಲಿ ಸುಮಾರು 911 ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲಿ ಅವರಿಗೆ ಸೈಟುಗಳನ್ನು ಒದಗಿಸುವುದಾಗಿ ಮಾತು ನೀಡಿದ್ದರು. ದುಃಖಕರ ವಿಚಾರವೆಂದರೆ ಇದುವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ” ಎಂದು ಅವರು ವಿಷಾದ ವ್ಯಕ್ತಪಡಿಸಿದರು.