ಸಂಸದ ಅನಂತಕುಮಾರ ಹೆಗಡೆ ವಿರುದ್ಧ ದೂರು ದಾಖಲಿಸುವಂತೆ ಪರಂ ಸೂಚನೆ

ಬೆಂಗಳೂರು : ಶಿರಸಿಯ ಟಿಎಸ್ಸೆಸ್ ಆಸ್ಪತ್ರೆಯ ವೈದ್ಯರ ಮೇಲೆ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಹಲ್ಲೆ ನಡೆಸಿದ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿದ್ದಂತೆಯೇ ರಾಜ್ಯ ಸರಕಾರ ಎಚ್ಚೆತ್ತುಕೊಂಡಿದೆ. ಸಂಸದನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ಗೃಹ ಸಚಿವ ಜಿ ಪರಮೇಶ್ವರ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿರುವ ಮೇರೆಗೆ ಶಿರಸಿ ಪೊಲೀಸರು ಸಂಸದನ ವಿರುದ್ಧ ಇಂದು ಬೆಳಿಗ್ಗೆ ಕೇಸು ದಾಖಲಿಸಿದ್ದಾರೆ.

ಘಟನೆ ಜನವರಿ 2ರ ರಾತ್ರಿ ನಡೆದಿದ್ದು ಸಂಸದ ಅನಂತಕುಮಾರ ವೈದ್ಯರಿಗೆ ತನ್ನ ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂಬ ನೆಪದ ಮೇಲೆ ವೈದ್ಯರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸೀಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ತರುವಾಯ ಭಾರತೀಯ ವೈದ್ಯಕೀಯ ಮಂಡಳಿ ಕೂಡ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಸಂಸದನ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ಯೋಚಿಸುತ್ತಿದೆ ಎಂದು ಮಂಡಳಿಯ ರಾಜ್ಯಾಧ್ಯಕ್ಷ ಡಾ ರಾಜಶೇಖರ ಬಳ್ಳಾರಿ ಮಾಹಿತಿ ನೀಡಿದ್ದಾರೆ.

2009ರಲ್ಲಿ ರಾಜ್ಯ ಸರಕಾರ ಜಾರಿಗೆ ತಂದ ಕಾಯಿದೆಯೊಂದರ ಪ್ರಕಾರ ವೈದ್ಯರ ಮೇಲೆ ಹಲ್ಲೆ ಅಥವಾ ಆಸ್ಪತ್ರೆ ಮೇಲೆ ದಾಳಿ ನಡೆಸಿದವರಿಗೆ ರೂ 50,000 ದಂಡ ಹಾಗೂ 3 ವರ್ಷ ಸಜೆ ವಿಧಿಸಬಹುದಾಗಿದೆ.

ಹಲವು ಕಡೆಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಕೆಲವೇ ಕೆಲವು ದೂರುಗಳು ದಾಖಲಾಗುತ್ತಿದ್ದು ಹೆಚ್ಚಿನ ಸಂದರ್ಭಗಳಲ್ಲಿ ರಾಜಕೀಯ ಒತ್ತಡದಿಂದಾಗಿ ಇಂತಹ ಪ್ರಕರಣಗಳು ಮುಚ್ಚಿ ಹೋಗುತ್ತವೆ.