ಕೇಂದ್ರದಿಂದ ಫೋನ್ ಕದ್ದಾಲಿಕೆ: ಗೃಹ ಸಚಿವ ರಾಮಲಿಂಗಾ ರೆಡ್ಡಿ

ನಮ್ಮ ಪ್ರತಿನಿಧಿ ವರದಿ

ಬೆಂಗಳೂರು : ಇದೀಗ ತಮ್ಮ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಮತ್ತೊಮ್ಮೆ ಶಂಕೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಲವು ಸಚಿವರು ಮತ್ತು ಹಿರಿಯ ನಾಯಕರ ಮಾತುಕತೆಯನ್ನು ಕೇಂದ್ರದ ಬಿಜೆಪಿ ನಾಯಕತ್ವದ ಎನ್‍ಡಿಎ ಸರಕಾರ ಟ್ಯಾಪಿಂಗ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ತಾವು ಕೂಡಲೇ ಕೇಂದ್ರ ಗೃಹ ಸಚಿವರಿಗೆ ದೂರು ನೀಡುವುದಾಗಿ ಅವರು ಗುರುವಾರ ಮಾಧ್ಯಮಗಳಿಗೆ ವಿವರಿಸಿದ್ದಾರೆ. “ನನ್ನ ಫೋನ್ ಕದ್ದಾಲಿಕೆಯಾಗುತ್ತಿದ್ದರೂ ನಾನೇನೂ ತಲೆಕೆಡಿಸಿಕೊಳ್ಳಲ್ಲ. ಶುಕ್ರವಾರದಂದು ಈ ಬಗ್ಗೆ ಕೇಂದ್ರ ಸಚಿವರಿಗೆ ಪತ್ರ ಬರೆಯಲಿದ್ದೇನೆ” ಎಂದರು.

“ಕಳೆದ ಹಲವು ಸಮಯಗಳಿಂದ ಕರ್ನಾಟಕದ ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಸಲಾಗುತ್ತಿದೆ. ನಮಗೆ ಅವರು ಹೇಗೆ ಟ್ಯಾಪಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಗೊತ್ತಿದೆ” ಎಂದಿರುವ ಗೃಹ ಸಚಿವರು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಇಂತಹ ಕೃತ್ಯ ಮಾಡುತ್ತಿದೆ” ಎಂದು ಹೇಳಿದರು.

ಯಾವ ಆಧಾರದಲ್ಲಿ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ಮಾಧ್ಯಮಗಳು ಮರು ಪ್ರಶ್ನಿಸಿದಾಗ ಉತ್ತರಿಸಿದ ಸಚಿವರು, “ಅವರು ಮಾಡದಿದ್ದರೆ ಇನ್ಯಾರು ಮಾಡುತ್ತಾರೆ. ನಮ್ಮಷ್ಟಕ್ಕೆ ನಾವೇ ಮಾಡಿಕೊಳ್ಳಲು ಸಾಧ್ಯವೇ..? ಅವರು ಮಾಡುತ್ತಿದ್ದಾರೆ ಅನ್ನೋದು ಖಚಿತ” ಎಂದು ಪ್ರತಿಕ್ರಿಯಿಸಿದರು.

ನೀರಾವರಿ ಸಚಿವ ಎಂ ಬಿ ಪಾಟೀಲ್, ಇಂಧನ ಸಚಿವ ಡಿ ಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಮ್ಮ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ದೂರು ನೀಡಿದ್ದಾರೆ ಎಂದರು.

LEAVE A REPLY