ತಮ್ಮ ಮಕ್ಕಳ ಹುಟ್ಟುಹಬ್ಬದಂದು ಮೈಸೂರಿನ ಪೊಲೀಸರಿಗೆ ರಜೆ

ಕ್ಯಾಶುವಲ್ ಲೀವ್ ಉಪಯೋಗಿಸಿ ವರ್ಷಕ್ಕೆ ಎರಡು ರಜೆಯನ್ನು ಮಕ್ಕಳ ಹುಟ್ಟುಹಬ್ಬದಂದು ನೀಡಲು ತೊಂದರೆಯಾಗದು ಎಂದು ಮೈಸೂರು ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಹೇಳಿದ್ದಾರೆ.

 ಮೈಸೂರು : ಪೊಲೀಸ್ ಕಾನಸ್ಟೇಬಲುಗಳಿಗೆ ನಗರ ಪೊಲೀಸ್ ಆಯುಕ್ತ ಎ ಸುಬ್ರಹ್ಮಣ್ಯೇಶ್ವರ ರಾವ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ತಮ್ಮ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಸುತ್ತೋಲೆ ಹೊರಡಿಸಿರುವ ರಾವ್, ಯಾವುದೇ ಕಾನಸ್ಟೇಬಲ್ ತಮ್ಮ ಮಕ್ಕಳ ಹುಟ್ಟು ಹಬ್ಬ ಆಚರಣೆಗಾಗಿ ರಜಾ ಅರ್ಜಿ ಹಿಡಿದುಕೊಂಡು ಬಂದರೆ ಅವರಿಗೆ ರಜೆ ನಿರಾಕರಿಸಬಾರದೆಂದು ಹೇಳಿದ್ದಾರೆ. ಸಿಬ್ಬಂದಿಯ ಕೊರತೆ ಯಾ ಕಾನೂನು ಸುವ್ಯವಸ್ಥೆ ಸಮಸ್ಯೆಯಿದೆಯೆಂದು ಹೇಳಿಕೊಂಡು ರಜೆ ನಿರಾಕರಿಸುವಂತಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಸದ್ಯದಲ್ಲಿಯೇ ಪೊಲೀಸ್ ಆಯುಕ್ತರು ಇನ್ನೊಂದು ಆದೇಶ ನೀಡಲಿದ್ದಾರೆ. ಅದೇನೆಂದರೆ ಎಲ್ಲಾ ಪೊಲೀಸ್ ಕಾನಸ್ಟೇಬಲುಗಳಿಗೆ ಅವರ ಮದುವೆ ವಾರ್ಷಿಕೋತ್ಸವದಂದು ರಜೆ ನೀಡುವುದು. “ಹಲವಾರು ಬಾರಿ ಪೊಲೀಸ್ ಪೇದೆಗಳು ಮಕ್ಕಳ ಹುಟ್ಟುಹಬ್ಬ ಯಾ ಮದುವೆ ವಾರ್ಷಿಕೋತ್ಸವವೆಂದು ತಮ್ಮ ರಜಾ ಅರ್ಜಿ ಹಿಡಿದುಕೊಂಡು ನನ್ನ ಬಳಿ ಬಂದಿದ್ದುಂಟು. ಅವರ ಹಿರಿಯಾಧಿಕಾರಿಗಳು ರಜೆ ನಿರಾಕರಿಸಿದ್ದರಿಂದ ಅವರು ನನ್ನನ್ನು ಭೇಟಿಯಾಗಿದ್ದರು. ಅವರಿಗೂ ತಮ್ಮ ಮಕ್ಕಳ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಕರ್ತವ್ಯವಿದೆ” ಎನ್ನುತ್ತಾರೆ ರಾವ್. ಕ್ಯಾಶುವಲ್ ಲೀವ್ ಉಪಯೋಗಿಸಿ ವರ್ಷಕ್ಕೆ ಎರಡು ರಜೆಯನ್ನು ಮಕ್ಕಳ ಹುಟ್ಟುಹಬ್ಬದಂದು ನೀಡಲು ತೊಂದರೆಯಾಗದು ಎಂದು ರಾವ್ ಹೇಳಿದ್ದಾರೆ.