ಸಂಪ್ಯ ಎಸೈ ವಿರುದ್ಧ ಹಿಂಜಾವೇ ಪ್ರತಿಭಟನೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಸಂಪ್ಯ ಗ್ರಾಮಾಂತರ ಠಾಣೆಯ ಎಸೈ ಅಬ್ದುಲ್ ಖಾದರ್ ಹಾಗೂ ಪೊಲೀಸ್ ಸಿಬ್ಬಂದಿ ಚಂದ್ರ ಮತ್ತು ರುಕ್ಮ ವಿರುದ್ಧ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.

ಎಸೈ ಅಬ್ದುಲ್ ಖಾದರ್ ಮತ್ತು ಸಿಬ್ಬಂದಿ ಲವ್ ಜಿಹಾದಿಗೆ ಮತ್ತು ಮತಾಂಧ ಶಕ್ತಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ಪರಿವಾರ ಕಾರ್ಯಕರ್ತರ ಮೇಲೆ ಕೇಸು ದಾಖಲು ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂಜಾವೇ ಅವರುಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಹಿಂಜಾವೇ ಮುಖಂಡ ಜಗದೀಶ್ ಶೇಣವ ಮಾತನಾಡಿ, “ಅಬ್ದುಲ್ ಖಾದರ್ ಮತಾಂಧ ಮುಸ್ಲಿಂ ಅಧಿಕಾರಿಯಾಗಿದ್ದಾರೆ. ಅವರು ಮುಸ್ಲಿಮರ ವಿರುದ್ಧ ದೂರು ಕೊಟ್ಟರೂ ದಾಖಲು ಮಾಡುತ್ತಿಲ್ಲ, ಲವ್ ಜಿಹಾದ್ ನಡೆಸುವ ಮಂದಿಯ ವಿರುದ್ಧ ದೂರು ನೀಡಿದರೆ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಆ ಕೃತ್ಯದಲ್ಲಿ ಭಾಗಿಯಾದವರಿಗೆ ಬೆಂಬಲ ನೀಡುವ ಮೂಲಕ ಹಿಂದೂವಿರೋಧಿ ನೀತಿ ಅಳವಡಿಸಿಕೊಂಡಿದ್ದಾರೆ. ಅಕ್ರಮ ಗೋಸಾಗಾಟಗಾರರ ಕುರಿತು ಮಾಹಿತಿ ನೀಡಿದ ಪರಿವಾರ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಿದ್ದಾರೆ. ಅವರ ಮನೆಗೆ ನುಗ್ಗಿ ತೊಂದರೆ ನೀಡುತ್ತಿದ್ದಾರೆ. ಈ ಅಧಿಕಾರಿಯಿಂದ ಗ್ರಾಮಾಂತರ ಭಾಗದಲ್ಲಿ ಅಶಾಂತಿಯ ವಾತಾವರಣ ತಲೆದೋರಿದೆ” ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸುಳ್ಯ, ಪುತ್ತೂರು ಮತ್ತು ಬಂಟ್ವಾಳದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ನಗರ ಪೊಲೀಸರು ಬಂದೋಬಸ್ತ್ ಮಾಡಿದ್ದರು.