ಬೈಬಲ್ ಅಧ್ಯಯನಕಾರರ ಕಟ್ಟಿಹಾಕಿದ ಹಿಂದುತ್ವ ಪಡೆ

  • ಮೃದುಲಾ ಚಾರಿ

ಮಧ್ಯಪ್ರದೇಶದ ಇಂದೋರ್ ನಗರ ಕ್ರೈಸ್ತರ ಕಾಲೊನಿಯಿಂದ ಏಳು ಬಾಲಕ-ಬಾಲಕಿಯರು ತಮ್ಮ ದೀಪಾವಳಿ ರಜೆಯ ಸಂದರ್ಭದಲ್ಲಿ ಬೈಬಲ್ ಅಧ್ಯಯನಕ್ಕಾಗಿ ಮುಂಬಯಿಗೆ ತೆರಳಲು ಸಿದ್ಧತೆ ನಡೆಸಿದ್ದರು. 50 ವರ್ಷದ ಅನಿತಾ ಫ್ರಾನ್ಸಿಸ್ ಮಾರ್ಗದರ್ಶನದಲ್ಲಿ 5ರಿಂದ 17 ವರ್ಷದವರೆಗಿನ ಏಳು ಮಕ್ಕಳು ರೈಲಿನಲ್ಲಿ ಪ್ರಯಾಣ ಮಾಡಲು ಮುಂದಾಗಿದ್ದರು. ಅಕ್ಟೋಬರ್ 23ರಂದು ಈ ತಂಡ ರೈಲಿನಲ್ಲಿ ಕುಳಿತ ಕೂಡಲೇ ಹಿಂದೂ ಜಾಗರಣ್ ಮಂಚ್ ಕಾರ್ಯಕರ್ತರು ರೈಲಿನೊಳಗೆ ನುಗ್ಗಿ ಈ ತಂಡವನ್ನು ಆವರಿಸಿದ್ದಾರೆ. ತಂಡದಲ್ಲಿದ್ದವರೆಲ್ಲರೂ ಕ್ರೈಸ್ತರೇ ಎಂದು ಹೇಳಿದರೂ ನಂಬದ ಆರೆಸ್ಸೆಸ್ ಪ್ರೇರಿತ ಕಾರ್ಯಕರ್ತರು ಫ್ರಾನ್ಸಿಸ್ ಅವರು ಬಲವಂತವಾಗಿ ಮಕ್ಕಳನ್ನು ಮತಾಂತರಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ.

ಮುಂಚಿತವಾಗಿಯೇ ಬಂದಿದ್ದ ಮಾಧ್ಯಮ ಮಿತ್ರರ ಎದುರಿನಲ್ಲೇ ಒಬ್ಬ ಬಾಲಕನ ಕಾಲಿಗೆ ಗಾಯವಾಗಿದ್ದರೂ ರೈಲ್ವೇ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ನಂತರ ಎಲ್ಲರನ್ನೂ ಕೋಣೆಯೊಳಗೆ ಕೂಡಿಹಾಕಲಾಗಿದ್ದು, ಮಕ್ಕಳನ್ನು ನೋಡಲು ಬಂದ ಪೋಷಕರಿಗೂ ಸಂಪರ್ಕ ಸಾಧಿಸಲಾಗಿಲ್ಲ. ನಂತರ ಸರ್ಕಾರಿ ಆಶ್ರಯತಾಣವೊಂದರಲ್ಲಿ ಹೆಣ್ಣು ಮಕ್ಕಳನ್ನು ಕೂಡಿಹಾಕಿದ್ದು, ಬಾಲಕರನ್ನು ಅನಾಥಾಲಯಕ್ಕೆ ಕರೆದೊಯ್ಯಲಾಗಿದೆ ಎಂದು ಪೋಷಕರಿಗೆ ಸುದ್ದಿ ಮುಟ್ಟಿದೆ. ಈ ಘಟನೆ ನಡೆದ ಒಂದು ವಾರದ ನಂತರ ಕೋರ್ಟ್ ಆದೇಶದ ಮೇರೆಗೆ ಮಕ್ಕಳನ್ನು ಅವರ ಪೋಷಕರಿಗೆ ಒಪ್ಪಿಸಲಾಗಿದೆ. ಕೆಲದಿನಗಳ ನಂತರ ಅನಿತಾ ಫ್ರಾನ್ಸಿಸ್ ಅವರನ್ನು ಬಿಡುಗಡೆ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಮತಾಂತರ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಈ ಘಟನೆ ಮಹತ್ವ ಪಡೆಯುತ್ತದೆ. ಈ ಘಟನೆಯಿಂದ ಮಕ್ಕಳ ಪೋಷಕರು ಭೀತಿಗೊಳಗಾಗಿದ್ದು, ಮಕ್ಕಳನ್ನು ಹೊರಗೆ ಕಳುಹಿಸಲೂ ಹಿಂಜರಿಯುತ್ತಿದ್ದಾರೆ.