ನಕಲಿ ದೇವಮಾನವರ ಪಟ್ಟಿ ಬಿಡುಗಡೆಗೊಳಿಸಿದ ಹಿಂದೂ ಸಂತರ ಸಭಾ

ಅಲಹಾಬಾದ್ : ಹಿಂದೂ ಸಂತರ ಅತ್ಯುನ್ನತ ಸಂಸ್ಥೆ ಅಖಿಲ ಭಾರತೀಯ ಅಖಾರ ಸಭಾ ದೇಶದಲ್ಲಿರುವ 14 ನಕಲಿ ದೇವಮಾನವರ ಪಟ್ಟಿಯನ್ನು ಬಿಡುಗಡೆಗೊಳಿಸಿದೆಯಲ್ಲದೆ ಬುಡವಿಲ್ಲದ ಕೆಲ ಪಂಥಗಳ ನಾಯಕರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದೆ.

À್ಸಸಭಾದ ಅಧ್ಯಕ್ಷ ಸ್ವಾಮಿ ನರೇಂದ್ರ ಗಿರಿ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್, ಹರ್ಯಾಣಾದ ಸ್ವಘೋಷಿತ ದೇವಮಾನವ ರಾಮಪಾಲ್, ಅತ್ಯಾಚಾರ ಆರೋಪಿ ಅಸಾರಾಂ ಹಾಗೂ ಆತನ ಪುತ್ರ ನಾರಾಯಣ ಸಾಯಿ ಹೆಸರುಗಳಿವೆ. ಇಂತಹ ಹಲವು ನಕಲಿ ಸಂತರ ಬಗ್ಗೆ ಜನರು ಎಚ್ಚರಿಕೆ ವಹಿಸುವಂತೆಯೂ ಗಿರಿ ಆಗ್ರಹಿಸಿದ್ದಾರೆ.

ಅಲಹಾಬಾದಿನ ಅಲ್ಲಾಹಪುರದಲ್ಲಿರುವ ಮಠ ಬಘಂಬರಿ ಗದ್ದಿಯಲ್ಲಿ ವಿವಿಧ ಅಖಾರಗಳ ಪ್ರತಿನಿಧಿಗಳ ಸಭೆಯ ನಂತರ ಈ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು. ಪಟ್ಟಿಯನ್ನು ಕೇಂದ್ರ ಸರಕಾರ, ರಾಜ್ಯ ಸರಕಾರಗಳು ಹಾಗೂ ವಿಪಕ್ಷಗಳಿಗೆ ಕಳುಹಿಸಲಾಗುವುದು ಹಾಗೂ ಇಂತಹ ಸ್ವಘೋಷಿತ ದೇವಮಾನವರುಗಳ ಕಾರ್ಯಚಟುವಟಿಕೆ ನಿಯಂತ್ರಿಸಲು ಪ್ರಬಲ ಶಾಸನವೊಂದನ್ನು ಜಾರಿಗೆ ತರಲು ಆಗ್ರಹಿಸಲಾಗುವುದು ಎಂದ ಗಿರಿ ತಮ್ಮ ಸಂಘಟನೆ ದೀಪಾವಳಿ ನಂತರ ಮತ್ತೆ 28 ಮಂದಿ ನಕಲಿ ದೇವಮಾನವರ ಪಟ್ಟಿ ಬಿಡುಗಡೆಗೊಳಿಸುವುದು ಎಂದರು.