ಮಸೀದೆ ಕಾರ್ಯಕ್ರಮದಲ್ಲಿ ಪಾಯಸ ವಿತರಿಸಿದ ಹಿಂದೂ ಕುಟುಂಬ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಚುನಾವಣೆಗಳು ಸಮೀಪಿಸುತ್ತಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಬಂಧಿ ಘರ್ಷಣೆಗಳು ಪದೇ ಪದೇ ಸಂಭವಿಸುತ್ತಾ ಆ ಮೂಲಕ ರಾಜಕೀಯ ಲಾಭದ ಲೆಕ್ಕಾಚಾರ ಶುರುವಾಗಿದ್ದರೆ, ಶಾಂತಿ-ಸೌಹಾರ್ದತೆಗೆ ಹೆಸರಾಗಿರುವ ಬುದ್ದಿವಂತರ ಜಿಲ್ಲೆಯಲ್ಲಿ ಸೌಹಾರ್ದ ಮನಸ್ಸುಗಳು ಧಾರಾಳವಾಗಿವೆ ಎಂಬುದಕ್ಕೆ ಮತ್ತೊಮ್ಮೆ ಫರಂಗಿಪೇಟೆ ಸಮೀಪದ ಮಸೀದಿ ಉದ್ಘಾಟನಾ ಕಾರ್ಯಕ್ರಮ ಸಾಕ್ಷಿಯಾಯಿತು.

ತಾಲೂಕಿನ ಫರಂಗಿಪೇಟೆ ಸಮೀಪದ ಕುಂಪಣಮಜಲು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಅರಫಾ ಜುಮಾ ಮಸೀದಿಯನ್ನು ಭಾನುವಾರ ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ಉದ್ಘಾಟಿಸಿದ್ದು, ಈ ಸುಂದರ ಸಂಭ್ರಮದ ಗಳಿಗೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಹಿಂದೂ ಕುಟುಂಬದ ಸದಸ್ಯರು ಸಿಹಿ ಪಾಯಸ ತಯಾರಿಸಿ ಹಂಚಿ ತಮ್ಮ ಸೌಹಾರ್ದತೆಯ ವಿಶಾಲ ಮನಸ್ಸನ್ನು ತೋರ್ಪಡಿಸಿ ಗಮನ ಸೆಳೆದರು.

ಕುಂಪಣಮಜಲು ನಿವಾಸಿ ದಿವಂಗತ ಸೋಮಪ್ಪ ಆಳ್ವ ಅವರ ಪುತ್ರರಾದ ಆನಂದ ಆಳ್ವ ಹಾಗೂ ವಿಠಲ ಆಳ್ವ ಮತ್ತು ಕುಟುಂಬಸ್ಥರು ಸೇರಿ ಪಾಯಸ ವಿತರಿಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು.

ಇದೇ ವೇಳೆ ಮಾತನಾಡಿದ ಖಾಝಿ ತ್ವಾಖಾ ಉಸ್ತಾದ್ ಭಾರತದ ಮಣ್ಣಿಗೆ ಪವಿತ್ರ ಇಸ್ಲಾಂ ಬಂದಂದಿನಿಂದಲೂ ಮತ ಸೌಹಾರ್ದತೆಯಿಂದ ಮಾತ್ರ ಮಸೀದಿ ನಿರ್ಮಾಣ ಕಾರ್ಯಗಳು ನಡೆಯುತ್ತಾ ಬಂದಿದೆ. ಇಲ್ಲಿನ ಸಹೋದರ ಧರ್ಮೀಯರ ಸರ್ವ ಸಹಕಾರದೊಂದಿಗೆ ಮಾತ್ರ ಮುಸ್ಲಿಂ ಪ್ರದೇಶಗಳಲ್ಲಿ ಮಸೀದಿಗಳು ಸ್ಥಾಪನೆಗೊಂಡಿದೆ. ಇಂತಹ ಧಾರ್ಮಿಕ ಸೌಹಾರ್ದತೆಗಳು ಶಾಶ್ವತವಾಗಿರ ನೆಲೆ ನಿಲ್ಲಬೇಕಾಗಿದೆ ಎಂದರು.