ಹಿಂದೂ ಮನೆಯಲ್ಲೂ ಕ್ರಿಸ್ಮಸ್ ಸಂಭ್ರಮ !

ನಮ್ಮ ಪ್ರತಿನಿಧಿ ವರದಿ

ಕುಮಟಾ : ಪಟ್ಟಣದ ಹೆರವಟ್ಟಾದ ವಿಠೋಬ ಕಾಮತ್ (ವಿ ಎಸ್ ಕಾಮತ್) ಮನೆಯಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ ಮೂಡಿದೆ.

ಕ್ರಿಶ್ಚನ್ ಬಾಂಧವರು ಐದಾರು ದಿನಗಳಿಂದ ಗೋದಲಿಯನ್ನು ನಿರ್ಮಿಸುವಲ್ಲಿ ತೊಡಗಿಕೊಳ್ಳುವುದಲ್ಲದೇ ಮನೆಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಕಂಡುಬರುವುದು ಸರ್ವೇಸಾಮಾನ್ಯ. ಆದರೆ, ಹಿಂದೂ ಧರ್ಮಿಯರಾದ ವಿ ಎಸ್ ಕಾಮತ್ ಮನೆಯಲ್ಲಿ ಏಸುಕ್ರಿಸ್ತ ಜನಿಸಿದ ಗೋದಲಿ ನಿರ್ಮಾಣವಾಗಿರುವುದು ವಿಶೇಷ. ಇದು ಸಮಾಜಕ್ಕೆ ಭಾವೈಕ್ಯತೆಯ ಸಂದೇಶ ಸಾರುವಂತಾಗಿದೆ. ವಿ ಎಸ್ ಕಾಮತ್ ಅವರ ಮೊಮ್ಮಗಳಾದ ನಿಖಿತಾ ಕಾಮತ್ ಅವರು ಕ್ರಿಸ್ಮಸ್ ಹಬ್ಬದ ನಿಮಿತ್ತ ಆಕರ್ಷಕ ಗೋದಲಿಯನ್ನು ನಿರ್ಮಿಸಿದ್ದು, ಇದು ನೋಡುಗರ ಗಮನ ಸೆಳೆದಿದ್ದಲ್ಲದೇ ಕ್ರಿಸ್ಮಸ್ ಸರ್ವಧರ್ಮಿಯರ ಭಾವೈಕ್ಯತೆ ಹಬ್ಬವೆಂದು ತಿಳಿಸಿದ್ದಾರೆ.

ನಿಖಿತಾ ಕಾಮತ್ ಮುಂಬೈನ ವಿಸ್ಲಿಂಗ್ ವುಡ್ಸ್ ಇಂಟರನ್ಯಾಷನಲ್ ಸ್ಕೂಲಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಚಿಕ್ಕಂದಿನಿಂದಲೂ ವಿವಿಧ ಧರ್ಮಿಯರ ಹಬ್ಬವನ್ನು ಮನೆಯಲ್ಲಿ ಆಚರಣೆ ಮಾಡುವುದು ಹವ್ಯಾಸ ಮಾಡಿಕೊಂಡಿದ್ದಾಳೆ. ಇತ್ತೀಚೆಗೆ ಕುಮಟಾಕ್ಕೆ ಆಗಮಿಸಿದ ನಿಖಿತಾ ಕ್ರಿಸ್ಮಸ್ ಹಬ್ಬದಂದು ಸುಂದರವಾದ ಗೋದಲಿ ನಿರ್ಮಿಸುವ ಮೂಲಕ ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದ್ದಾರೆ.