`ಹಿಂದೂ ದಂಪತಿ ಕನಿಷ್ಟ 3 ಮಕ್ಕಳನ್ನು ಪಡೆಯಬೇಕು’

ನಮ್ಮ ಪ್ರತಿನಿಧಿ ವರದಿ

ಶಿರಸಿ : “ಭ್ರೂಣಹತ್ಯೆಯು ಮಹಾಪಾಪದ ಕೆಲಸವಾಗಿದ್ದು, ಸ್ತ್ರೀ ಭ್ರೂಣಹತ್ಯೆ ಹೆಚ್ಚುತ್ತಿದೆ. ಕಾನೂನು, ಜನರ ಜಾಗೃತಿಯಿಂದ ಪ್ರತ್ಯಕ್ಷ ಭ್ರೂಣಹತ್ಯೆ ಇಳಿಮುಖವಾದರೂ ಪರೋಕ್ಷ ಭ್ರೂಣಹತ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಅಂಶವಾಗಿದೆ” ಎಂದು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿ ಹೇಳಿದರು.

ಅವರು ಗುರುವಾರ ಸಂಜೆ ಗ್ರಾಮಾಭ್ಯುದಯ ಆಶ್ರಯದಲ್ಲಿ ನಡೆದ ಸರ್ವ ದಂಪತಿಗಳ ಶಿಬಿರದ ಸಮಾರೋಪದಲ್ಲಿ ಮಾತನಾಡುತ್ತಿದ್ದರು. “ಭಾರತದಲ್ಲಿ ಹಿಂದೂ ಜನಸಂಖ್ಯೆ ಕ್ಷೀಣಿಸುತ್ತಿದೆ. ಬೇರೆ ಸಮುದಾಯದ ಜನಸಂಖ್ಯೆ ಹೆಚ್ಚುತ್ತಿದೆ. ಹಿಂದೂಸ್ಥಾನದಲ್ಲಿ ಹಿಂದೂಗಳ ಜನಸಂಖ್ಯೆ ಇಳಿಮುಖ ಅಪಾಯಕಾರಿಯಾಗಿದೆ. ಹಿಂದಿನವರಂತೆ 10 ಮಕ್ಕಳನ್ನು ಹಿಂದೂಗಳನ್ನು ಹೇರಬೇಕು. ಇಲ್ಲದಿದ್ದರೆ ಕನಿಷ್ಠ 3 ಮಕ್ಕಳನ್ನು ಹೇರಬೇಕು. ಸಮಾಜದಲ್ಲಿ ವಿವಾಹ ವಿಚ್ಛೇದನ ಹೆಚ್ಚುತ್ತಿದ್ದು, ಇದರಿಂದ ಕುಟುಂಬ ವ್ಯವಸ್ಥೆ ಕುಸಿಯುತ್ತದೆ. 2ನೇ ವಿವಾಹವಾದರೂ ನೆಮ್ಮದಿ ಸಿಗುವುದು ಕಷ್ಟ. ಪುರಾಣ, ಇತಿಹಾಸಗಳಲ್ಲಿ ವಿವಾಹ ವಿಚ್ಛೇಧನ ಇರುತ್ತಿರಲಿಲ್ಲ. ವಿವಾಹ ಪವಿತ್ರ ಸಂಬಂಧವಾಗಿದ್ದು, ವಿಚ್ಛೇಧನದಂತಹ ಅವಿವೇಕಕ್ಕೆ ಮುಂದಾಗಬಾರದು” ಎಂದರು.

“ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಕೊಡುವಷ್ಟು ಸ್ಥಾನಮಾನ, ಗೌರವ ಬೇರೆ ಧರ್ಮದಲ್ಲಿ ಕಾಣುವದಿಲ್ಲ. ಅದರ ಜೊತೆಗೆ ಮಹಿಳೆಯರನ್ನು ನೋಡುವ ಪೂಜ್ಯ, ಪಾವಿತ್ರ ಭಾವನೆಯು ಬೇರೆ ಕಡೆ ಕಡಿಮೆ. ಹುಟ್ಟಿದ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಶಿಕ್ಷಣ ವ್ಯವಸ್ಥೆಯಲ್ಲೇ ಸಂಸ್ಕಾರದ ಶಿಕ್ಷಣ ಬರಬೇಕು. ಮಕ್ಕಳನ್ನು ಬಾಲ್ಯದಲ್ಲೇ ದೂರವಿಟ್ಟರೆ ಮುಂದೆ ಅವರು ದೊಡ್ಡವರಾದ ಮೇಲೆ ತಂದೆ-ತಾಯಿಗಳನ್ನು ದೂರವಿರಿಸುವ ಅಪಾಯವಿದೆ. ಮಕ್ಕಳಿಗೆ ಒಳ್ಳೆಯ ಗ್ರಂಥಗಳನ್ನು ಓದಿಸುವ ಜತೆಗೆ ಉತ್ತಮ ಜ್ಞಾನ ನೀಡಬೇಕು” ಎಂದರು.

 

1 COMMENT

Comments are closed.