ಬಾಬಾಬುಡನಗಿರಿಯಲ್ಲಿ ಕೇಸರಿ ಧ್ವಜ ಹಾರಿಸಿದ ಹಿಂದು ಕಾರ್ಯಕರ್ತರು

ಪೊಲೀಸರಿಂದ ಲಾಠಿ ಚಾರ್ಜ್

ನಮ್ಮ ಪ್ರತಿನಿಧಿ ವರದಿ

ಚಿಕ್ಕಮಗಳೂರು : ಕೆಲ ಹಿಂದು ಕಾರ್ಯಕರ್ತರು ದತ್ತ ಜಯಂತಿಯಂಗವಾಗಿ ಬಾಬಾಬುಡನಗಿರಿಯ ವಿವಾದಿತ ಸ್ಥಳದಲ್ಲಿ ರವಿವಾರ ಭಗವಧ್ವಜ (ಕೇಸರಿ ಧ್ವಜ) ಹಾರಿಸಿದ ನಂತರ  ಅಲ್ಲಿನ ದತ್ತಾತ್ರೇಯ ಸ್ವಾಮಿ ದರ್ಗಾದ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದ ಪರಿಣಾಮ ಪೊಲೀಸರು ಮಧ್ಯ ಪ್ರವೇಶಿಸಿ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಬೇಕಾಯಿತು.

ಈ ಘಟನೆಯ ನಂತರ ಚಿಕ್ಕಮಗಳೂರು ನಗರದ ಉಪ್ಪಳಿಯಲ್ಲಿ ದುಷ್ಕರ್ಮಿಗಳು ಖಾಸಗಿ ಬಸ್ಸೊಂದಕ್ಕೆ ಕಲ್ಲೆಸೆದಿದ್ದು  ಪರಿಸ್ಥಿತಿ ಬಿಗಡಾಯಿಸಬಹುದೆಂಬ ಭಯದಿಂದ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರಿಂದ ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಿತ್ತು. ನಗರದಲ್ಲಿ ಇಬ್ಬರು ಬೈಕ್ ಸವಾರರ ಮೇಲೆ ಹಲ್ಲೆ ಕೂಡ ನಡೆದಿದೆಯೆನ್ನಲಾಗಿದೆ

ಬಜರಂಗದಳ ಮತ್ತಿತರ ಹಿಂದು ಸಂಘಟನೆಗಳು ಕಳೆದ ಶುಕ್ರವಾರದಿಂದ ಆಯೋಜಿಸಿದ್ದ ದತ್ತ ಜಯಂತಿ ಆಚರಣೆಯ ನಿಮಿತ್ತ  ರಾಜ್ಯದ ವಿವಿಧೆಡೆಗಳಿಂದ  ನೂರಾರು ಹಿಂದು ಕಾರ್ಯಕರ್ತರು ಬಾಬಾಬುಡನಗಿರಿಗೆ ಆಗಮಿಸಿದ್ದು ಪೊಲೀಸರು ಕೂಡ ಆಚರಣೆ ಶಾಂತಿಯುತವಾಗಿ ನಡೆಯಲು ವ್ಯಾಪಕ ಬಂದೋಬಸ್ತ್ ಏರ್ಪಡಿಸಿದ್ದರು.

ರವಿವಾರದ ಘಟನೆಯ ನಂತರ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು ಸುಮಾರು 2,000 ಪೊಲೀಸರನ್ನು ವಿವಾದಿತ ಸ್ಥಳದ ಅಕ್ಕಪಕ್ಕ ಹಾಗೂ ಪಟ್ಟಣದಲ್ಲಿ ನಿಯೋಜಿಸಲಾಗಿದೆ ಎಸ್ಪಿ ಕೆ ಅಣ್ಣಾಮಲೈ ಅವರು ಸ್ವತಃ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಬಾಬಾಬುಡನಗಿರಿಗೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ  ದತ್ತ ಪೀಠಕ್ಕೆ ಹೋಗುವ ದಾರಿಯಲ್ಲಿ ಸಂಚಾರ ಸಮಸ್ಯೆಯೂ ಸೃಷ್ಟಿಯಾಗಿತ್ತು.