ಸತ್ಯನಾರಾಯಣ ರಾವ್ ಬೆಂಬಲಿಸಿ ಹಿಂಡಲಗ ಜೈಲು ಸಿಬ್ಬಂದಿ ಧರಣಿ

ಬೆಳಗಾವಿ : ಲಂಚ ಸ್ವೀಕರಿಸಿ ಶಶಿಕಲಾ ನಟರಾಜನರಿಗೆ ವಿಶೇಷ ಸೌಲಭ್ಯವನ್ನು ಒದಗಿಸಿರುವ ಆರೋಪ ಹೊತ್ತಿರುವ ಪೊಲೀಸ್ ಪ್ರಧಾನ ನಿರ್ದೇಶಕ ಸತ್ಯನಾರಾಯಣ ರಾವ್ ಅವರನ್ನು ಬೆಂಬಲಿಸಿ ಹಿಂಡಲಗದ ಕೇಂದ್ರೀಯ ಜೈಲಿನ ಸಿಬ್ಬಂದಿ ಮತ್ತು ಕೈದಿಗಳು ಮೌನ ಪ್ರತಿಭಟನೆ ಮಾಡಿದ್ದಾರೆ.

ಡಿಐಜಿ ದಿವಾಕರ ರೂಪ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದ ಬಗ್ಗೆ ತಮ್ಮ ವರದಿಯಲ್ಲಿ ಒಂಭತ್ತು ಅವಲೋಕನಗಳನ್ನು ಮಾಡಿದ್ದು, ಹಿರಿಯ ಅಧಿಕಾರಿಗಳ ವಿರುದ್ಧ ಲಂಚದ ಆರೋಪವೂ ಅದರಲ್ಲಿ ಸೇರಿದೆ. ಈ ವರದಿಯಲ್ಲಿ ತಮಿಳುನಾಡಿನ ನಾಯಕಿ ಶಶಿಕಲಾರಿಗೆ ನಿಯಮಗಳನ್ನು ಉಲ್ಲಂಘಿಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿವಿಐಪಿ ಸೌಲಭ್ಯವನ್ನು ಕೊಡಲಾಗುತ್ತಿದೆ ಎಂದೂ ಹೇಳಿದ್ದಾರೆ. ಈ ಪ್ರಕರಣದಲ್ಲಿ ಅಧಿಕಾರಿಗಳು ಲಂಚ ಸ್ವೀಕರಿಸಿರುವ ಆರೋಪವನ್ನೂ ಅವರು ಮಾಡಿದ್ದಾರೆ.

ಬೆಳಗಾವಿಯ ಹಿಂಡಲಗ ಕೇಂದ್ರೀಯ ಜೈಲು ಸುಪರಿಂಟೆಂಡೆಂಟ್ ಟಿಪಿ ಶೇಷ ಅವರೂ ಸಹ ಕಪ್ಪು ಪಟ್ಟಿಯನ್ನು ಧರಿಸಿ ಜೈಲು ಸಿಬ್ಬಂದಿ ಜೊತೆಗೂಡಿ ವರದಿಯ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಸಿಬ್ಬಂದಿ ಜೈಲಿನ ಮುಂದೆ ಡೇರೆ ಹಾಕಿ ಕಪ್ಪು ಪಟ್ಟಿಗಳನ್ನು ಧರಿಸಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.