ಗುಡ್ಡಕ್ಕೆ ಆಕಸ್ಮಿಕ ಬೆಂಕಿ

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದರು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಗುಡ್ಡವೊಂದಕ್ಕೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಗಿಡ-ಮರಗಳು ಸುಟ್ಟು ಕರಕಲಾದ ಘಟನೆ ತಾಲೂಕಿನ ಫರಂಗಿಪೇಟೆ ಸಮೀಪದ 10ನೇ ಮೈಲಿಕಲ್ಲು ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ-75ರ ಮಾರಿಪಳ್ಳ ಸಮೀಪದ ಹತ್ತನೇ ಮೈಲುಕಲ್ಲು ಎಂಬಲ್ಲಿ ಅಮೆಮಾರು ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿರುವ ಗುಡ್ಡದಲ್ಲಿ ಕಳೆದ ಕೆಲ ದಿನಗಳ ಹಿಂದೆ ಗುಡ್ಡ ಸಮತಟ್ಟು ಮಾಡುವ ಸಲುವಾಗಿ ಮರ-ಗಿಡಗಳನ್ನು ಕಡಿದು ಹಾಕಲಾಗಿತ್ತು. ಗುರುವಾರ ಮಧ್ಯಾಹ್ನ ಆಕಸ್ಮಿಕವಾಗಿ ಗುಡ್ಡಕ್ಕೆ ಬೆಂಕಿ ಬಿದ್ದು ಈ ಅವಘಡ ಸಂಭವಿಸಿದೆ.

ಗುಡ್ಡದ ಸುತ್ತಲೂ ವಾಸ್ತವ್ಯದ ಮನೆಗಳಿದ್ದು, ಅಪಾಯದ ಸುಳಿವು ದೊರೆತ ಹಿನ್ನೆಲೆಯಲ್ಲಿ ಸ್ಥಳೀಯರು ತಕ್ಷಣ ಮಂಗಳೂರು ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ರವಾನಿಸಿದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಶೀರ್ ಪೇರಿಮಾರು ಸಹಿತ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗಳೊಂದಿಗೆ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.