ಮದ್ಯದಂಗಡಿ ಸ್ಥಳಾಂತರ : ಪ್ರತಿಭಟನೆ ಐದನೇ ದಿನಕ್ಕೆ

ಕಾಸರಗೋಡು : ಉಚ್ಚ ನ್ಯಾಯಾಲಯದ ಆದೇಶಾನುಸಾರ ಹೆದ್ದಾರಿ ಸನಿಹದ ಬಿವರೇಜ್ ಕಾಪೆರ್Çರೇಶನ್ ಮದ್ಯದಂಗಡಿಗಳನ್ನು ಸ್ಥಳಾಂತರಿಸುವ ಆದೇಶದ ಬೆನ್ನಲ್ಲಿ ವಿವಿಧೆಡೆ ಗೊಂದಲ, ಹೋರಾಟಗಳು ವಿವಾದಾತ್ಮಕವಾಗುತ್ತಿದ್ದು, ಕುಂಬಳೆಯಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ.

ಕುಂಬಳೆ ಪೇಟೆಯ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಮದ್ಯದಂಗಡಿಯನ್ನು ನಾರಾಯಣ ಮಂಗಲದ ಖಾಸಗಿ ವ್ಯಕ್ತಿಯೊಬ್ಬರ ಮನೆಗೆ ಸ್ಥಳಾಂತರಿಸುವ ಹುನ್ನಾರ ವಿವಿಧ ಕಾರಣಗಳಿಂದ ಹಲವು ಸಂಶಯಗಳಿಗೆ ಕಾರಣವಾಗಿದೆ. ಮದ್ಯದಂಗಡಿ ಸ್ಥಳಾಂತರ ವಿರುದ್ಧ ಹೋರಾಟ ಐದನೇ ದಿನಕ್ಕೆ ಕಾಲಿರಿಸಿದೆ. ದಿನಪೂರ್ತಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಆಕ್ರೋಶ ಭರಿತ ಪ್ರತಿಭಟನಕಾರರು ಯಾವ ಕಾರಣಕ್ಕೂ ನಾರಾಯಣಮಂಗಲದಲ್ಲಿ ಮದ್ಯದಂಗಡಿ ತೆರೆಯಲು ಬಿಡಲಾರೆವೆಂದು ಪಟ್ಟುಹಿಡಿದಿದ್ದಾರೆ.

ನಾರಾಯಣಮಂಗಲಕ್ಕೆ ಮದ್ಯದಂಗಡಿ ಸ್ಥಳಾಂತರಿಸುವ ಹುನ್ನಾರದ ಹಿಂದೆ ಭಾರೀ ಕುಳಗಳು ತೆರೆಮರೆಯಲ್ಲಿ ವ್ಯವಸ್ಥಿತ ಕೈವಾಡಗಳು ಕಾರ್ಯವೆಸಗಿರುವುದಾಗಿ ಹೋರಾಟ ಸಮಿತಿ ಬಲವಾಗಿ ಆರೋಪಿಸಿದೆ. ವಿವಿಧ ಅಗತ್ಯಗಳಿಗೆ ಕುಂಬಳೆ ಗ್ರಾಮ ಪಂಚಾಯತಿಯಲ್ಲಿ ಕಳೆದೆರಡು ತಿಂಗಳ ಹಿಂದೆ ಪರವಾನಿಗೆಗಳಿಗೆ ಅರ್ಜಿ ಸಲ್ಲಿಸಿರುವ ನಾಗರಿಕರ ಅರ್ಜಿಗಳು ವಿಲೇವಾರಿಗೊಳ್ಳದೆ ಹಿನ್ನಡೆಯಲ್ಲಿರುವಾಗ ಕೇವಲ ಹತ್ತು ದಿನಗಳ ಹಿಂದೆ ಮದ್ಯದಂಗಡಿ ಸ್ಥಳಾಂತರಿಸಲು ಸಲ್ಲಿಸಿದ ಅರ್ಜಿಗೆ ಪರವಾನಿಗೆಯನ್ನು ಗ್ರಾ ಪಂ ಅಧಿಕಾರಿಗಳು ನೀಡಿರುವರೆಂದು ಹೋರಾಟ ಸಮಿತಿ ಆರೋಪಿಸಿದೆ.

ನಾರಾಯಣಮಂಗಲದ ಪ್ರವಾಸಿ ವ್ಯಕ್ತಿಯೊಬ್ಬರ ಮನೆಯನ್ನು ವ್ಯಾವಹಾರಿಕ ಉದ್ದೇಶಗಳಿಗೆ ಬಳಸುವಂತೆ ಕಾನೂನುಗಳನ್ನು ಗಾಳಿಗೆ ತೂರಿ ಪರವಾನಿಗೆ ನೀಡಿರುವ ಅಧಿಕಾರಿ ವರ್ಗದ ಕ್ರಮ ತೀವ್ರ ಖಂಡನೀಯವೆಂದು ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಇದರ ಹಿಂದೆ ರಾಜಕೀಯ ಪಕ್ಷವೊಂದರ ಕಾಣದ ಕೈ ಕಾರ್ಯವೆಸಗಿದೆ ಎಂದು ಆರೋಪಿಸಿದೆ.