ಅಧಿಕಾರಿಗಳು-ಜನಪ್ರತಿನಿಧಿಗಳ ಭಾಷಾ ಸಂವಹನ ಕೊರತೆಯಿಂದ `ಹೆದ್ದಾರಿ ನಿರ್ಮಾಣ’ ಸಭೆ ವಿಫಲ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ವಿಶೇಷ ಸಭೆ ಎನ್ ಎಚ್ ಎ ಐ ಅಧಿಕಾರಿಗಳು ಮತ್ತು ಜಿಂ ಪಂ ಸದಸ್ಯರ ಮಧ್ಯೆ ಭಾಷಾ ಸಂವಹನ ಕೊರತೆಯಿಂದ ವಿಫಲಗೊಂಡಿತು.

ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಬಹುತೇಕ ಸದಸ್ಯರ ವ್ಯಾಪ್ತಿಯಲ್ಲಿಲ್ಲ. ಹಾಗಾಗಿ ಒಟ್ಟು 39 ಸದಸ್ಯರ ಪೈಕಿ ಕೇವಲ 19 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸುರತ್ಕಲ್ಲಿನಿಂದ ಕುಂದಾಪುರವರೆಗಿನ ವಿಸ್ತರಿತ ಭಾಗದಲ್ಲಿ ಈವರೆಗೂ ಪ್ರಸ್ತಾವಿತ ಫ್ಲೈಓವರುಗಳು ಅಥವಾ ಕಾಲು ಸೇತುವೆಗಳು ಮತ್ತು ಮೇಲ್ಸೇತುವೆಗಳ ಕಾಮಗಾರಿ ಆರಂಭಗೊಂಡಿಲ್ಲ. ಅಂಬಲಪಾಡಿ, ಕರಾವಳಿ ಮತ್ತು ಪಡುಬಿದ್ರಿ ಜಂಕ್ಷನುಗಳಲ್ಲಿ ಯಾವುದೇ ಮುನ್ಸೂಚನೆ ನೀಡದೆ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಳಿಸಲಾಗಿದೆ. ಅರ್ಧಂಬರ್ಧ ಕಾಮಗಾರಿ ನಡೆದಿರುವಲ್ಲಿ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಪಾದಚಾರಿಗಳಿಗೆ ರಸ್ತೆ ದಾಟಲು ಸಮಸ್ಯೆಯಾಗುತ್ತಿದೆ ಎಂದು ಜಿ ಪಂ ಸದಸ್ಯ ಜನಾರ್ದನ ತೋನ್ಸೆ ದೂರಿದರು.

ಎನ್ ಎಚ್ ಎ ಐ ಅಧಿಕಾರಿಗಳ ಉದಾಸೀನತೆಯಿಂದ ಇಲ್ಲಿ ಹಲವು ಸಮಸ್ಯೆ ಹುಟ್ಟಿಕೊಂಡಿವೆ. ಇಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮತ್ತೊಂದು ಹಗರಣವಾಗಿದ್ದು, ಅಧಿಕಾರಿಗಳು ಸೂಕ್ತ ಸರ್ವೇ ನಡೆಸದೆ ಭೂ-ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ. ಜಾಗ ಕಳೆದುಕೊಂಡವರಿಗೆ ಪರಿಹಾರ ನೀಡದೆ ಅನಧಿಕೃತ ಜಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದವರು ಆರೋಪಿಸಿದರು.

ಇಲ್ಲಿ ಭೂಮಿ ಕಳೆದುಕೊಂಡವರಿಗೆ ಭೂಮಿಗೆ ನಿಗದಿಪಡಿಸಲಾಗಿರುವ ಸೂಕ್ತ ಮೊತ್ತ ನೀಡಿಲ್ಲ. ಒಂದು ಸೆಂಟ್ಸ್ ಜಾಗಕ್ಕೆ ಮೂರರಿಂದ 3.5 ಲಕ್ಷ ರೂ ಇದ್ದರೂ, ಎನ್ ಎಚ್ ಎ ಐ ಬರೇ 30,000 ರೂ ನೀಡುತ್ತಿದೆ. ಇದು ಅನ್ಯಾಯ ಎಂದು ಜಿ ಪಂ ಉಪಾಧ್ಯಕ್ಷ ಶೀಲ ಶೆಟ್ಟಿ ಹೇಳಿದರು. ಕೆಲವು ಕಡೆಯಲ್ಲಿ ಅಧಿಕಾರಿಗಳು ಮನಬಂದಂತೆ 60 ಮೀಟಿರಿನಿಂದ 45 ಮೀಟರಿಗೆ ರಸ್ತೆ ಅಗಲೀಕರಣ ಕಡಿತಗೊಳಿಸಿದ್ದಾರೆ ಎಂದವರು ದೂರಿದರು.

ಸಭೆಯಲ್ಲಿ ಸದಸ್ಯರು ಮುಂದಿಟ್ಟ ಸರ್ವಾನುಮತದ ಬೇಡಿಕೆಗಳಿಗೆ ಎನ್ ಎಚ್ ಎ ಐ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿದಾಗ, ಕನ್ನಡ ತಿಳಿಯದ ಅಧಿಕಾರಿಗಳು ಉತ್ತರಿಸಲು ಅಸಮರ್ಥರಾದರು.